ಸಂಹಿತೆ ಉಲ್ಲಂಘನೆ: ಆರೋಪ
ದೇವದುರ್ಗ: ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಬಸವ ವಸತಿ ಯೋಜನೆಯ ಚೆಕ್ಗಳನ್ನು ವಿತರಿಸುತ್ತಿದ್ದಾರೆಂದು ತಾಲೂಕು ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಮ್ಜದ್ ಅಲಿ ಆರೋಪಿಸಿದ್ದಾರೆ. ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪುರಸಭೆಯ ಕೆಲ ಸಿಬ್ಬಂದಿ ಮತ್ತು ಮುಖ್ಯಾಧಿಕಾರಿ ಇದನ್ನು ಲೆಕ್ಕಿಸದೇ ವಸತಿ ಯೋಜನೆ ಚೆಕ್ಗಳನ್ನು ಕೆಲ ಬಿಜೆಪಿ ಮುಖಂಡರ ನೇತೃತ್ವದಲ್ಲಿ ವಿತರಣೆ ಮಾಡುತ್ತಿದ್ದಾರೆಂದು ದೂರಿದ್ದಾರೆ. ಚೆಕ್ಗಳನ್ನು ಎಲ್ಲಾ ಫಲಾನುಭವಿಗಳಿಗೆ ವಿತರಿಸದೇ ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಚೆಕ್ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ಎಲ್ಲಾ ಬಡ ಫಲಾನುಭವಿಗಳ ಚೆಕ್ ನೀಡಬೇಕು. ಆದರೆ ಈ ವಿತರಣೆಯಲ್ಲಿ ಕೂಡ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಚೆಕ್ ವಿತರಿಸುತ್ತಿರುವ ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಯಾದಗಿರಿಗೆ ಚೋಳನ್ ಡಿಸಿ
ಯಾದಗಿರಿ: ನೂತನ ಜಿಲ್ಲಾಧಿಕಾರಿಯಾಗಿ ಪಿ. ರಾಜೇಂದ್ರ ಚೋಳನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಳಕ್ಕೆ ನಿಯೋಜಿತರಾದ ಚೋಳನ್ ಅವರು ಆಗಮಿಸಿ ಗುರುವಾರ ಅಧಿಕಾರಿ ಸ್ವೀಕರಿಸಿದರು. ಜಿಲ್ಲೆಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಎಲ್ಲ ಸಹಕಾರ ಅಗತ್ಯವಿದೆ. ಅಲ್ಲದೇ ಹೊಸ ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಜಮಾದಾರ ಅವರು ಕಳೆದ 6 ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು. ಇದರಿಂದ 3 ವರ್ಷಗಳ ಅವಧಿಯಲ್ಲಿ ಜಿಲ್ಲೆ ನಾಲ್ವರು ಜಿಲ್ಲಾಧಿಕಾರಿ ಕಾಣುವಂತಾಗಿದೆ.
'ಚುನಾವಣೆಗೆ ಸಹಕರಿಸಿ'
ಯಾದಗಿರಿ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾದ್ಯಂತ ವ್ಯವಸ್ಥಿತವಾಗಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಸುವ ಉದ್ದೇಶದೊಂದಿಗೆ ಎಲ್ಲಾ ಅಧಿಕಾರಿಗಳು ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಗುರುವಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಪಿ. ರಾಜೇಂದ್ರ ಜೋಳನ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಂತ ಈವರೆಗೆ ಕೈಗೊಳ್ಳಲಾದ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.