ಇಂದಿರಾ ಆವಾಸ್ ವಸತಿ ಯೋಜನೆ ಅವ್ಯವಹಾರ ಪರಿಶೀಲನೆಗೆ ಸೂಚನೆ
ಮುದಗಲ್: ಇಂದಿರಾ ಆವಾಸ್ ಯೋಜನೆ ಅಡಿಯ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪರಿಶೀಲಿಸಿ ವರದಿ ಕಳಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶಿಸಿ ಸೂಚನೆ ನೀಡಿದೆ.
ಪಟ್ಟಣ ಸಮೀಪದ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿಯಲ್ಲಿ 2012- 13ನೇ ಸಾಲಿನ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ 145 ಹೆಚ್ಚುವರಿ ಮನೆಗಳನ್ನು ನಿಗಮದಿಂದ ಮಂಜೂರು ಮಾಡಲಾಗಿತ್ತು. ಆದರೆ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಶ್ರೀಮಂತರಿಗೆ ಮನೆಗಳನ್ನು ನೀಡಿ ಅವ್ಯವಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ನಿಗಮಕ್ಕೆ ದೂರು ಸಲ್ಲಿಸಿದ್ದರು.
ಪ್ರತ್ಯಕ್ಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿ: ಈ ಹಿನ್ನೆಲೆಯಲ್ಲಿ ಮಾ.16ರಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಿರುವ ನಿಗಮದ ವ್ಯವಸ್ಥಾಪಕರು ಗ್ರಾಪಂ.ನಲ್ಲಿ ಆಯ್ಕೆ ಮಾಡಲಾದ 145 ಫಲಾನುಭವಿಗಳ ಅರ್ಹತೆಯನ್ನು ನಿಯಮಾನುಸಾರ ಪರಿಶೀಲಿಸಬೇಕು.
ಅಲ್ಲದೆ ಸದರಿ ಪತ್ರದೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಫಲಾನುಭವಿ ಸದ್ಯ ವಾಸಿಸುತ್ತಿರುವ ಮತ್ತು ಮನೆ ನಿರ್ಮಾಣ ಮಾಡುವ ನಿವೇಶನದ ಪ್ರತ್ಯೇಕ ಭಾವಚಿತ್ರಗಳನ್ನ ಹಾಗೂ ನಿವೇಶನ ಹೊಂದಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ನೋಡಲ್ ಅಧಿಕಾರಿಗಳು ಪ್ರತ್ಯಕ್ಷವಾಗಿ ಪರಿಶೀಲಿಸಿ ಏ.10 ರೊಳಗಾಗಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಇದು ಸಾಧ್ಯವಾಗುವುದಿಲ್ಲ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.