ಏ.1ರಿಂದ ಬಸವ ತತ್ವ ದರ್ಶನ ಪ್ರವಚನ
ಕನ್ನಡಪ್ರಭ ವಾರ್ತೆ ಜೇವರ್ಗಿ ಮಾ.29
ಬಸವ ಕೇಂದ್ರ ತಾಲೂಕು ಘಟಕದ ವತಿಯಿಂದ ಏ.1ರಿಂದ 15ರವರೆಗೆ ಬಸವ ತತ್ವ ದರ್ಶನ ಪ್ರವಚನ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ ತಿಳಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಬಸವ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವ ಪರಂಪರೆಯ ಕೊನೆಯ ವಚನಕಾರ ಷಣ್ಮುಖ ಶಿವಯೋಗಿಗಳ ಕಾಯಕ ಕ್ಷೇತ್ರ ಜೇವರ್ಗಿ ಪಟ್ಟಣದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು-ಮಧುರಖಂಡಿ ಬಸವ ಜ್ಞಾನ ಗುರುಕುಲದ ಈಶ್ವರ ಮಂಟೂರ್ ಅವರು 15 ದಿನಗಳವರೆಗೆ ದಿನನಿತ್ಯ ಸಂಜೆ 6ರಿಂದ 7.30ರವರೆಗೆ ಪ್ರವಚನ ಕಾರ್ಯಕ್ರಮ ನಡೆಸಿಕೊಡುವರು ಎಂದರು.
ಪ್ರವಚನ ಕಾರ್ಯಕ್ರಮವನ್ನು ಬಸವ ಕೇಂದ್ರ ಜಿಲ್ಲಾ ಕೋಶಾಧ್ಯಕ್ಷ ಸೋಮಣ್ಣ ನಡುಕಟ್ಟಿ ಉದ್ಘಾಟಿಸಲಿದ್ದು, ಸೊನ್ನದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನಕಗುರು ಪೀಠದ ನಿಂಗಣ್ಣ ಶರಣರು ಉಪಸ್ಥಿತಿಯಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ಬಸವ ಕೇಂದ್ರದ ತಾಲೂಕು ಗೌರವಾಧ್ಯಕ್ಷ ಶಿವಣ್ಣಗೌಡ ಹಂಗರಗಿ, ಸರ್ಕಾರಿ ವೀರಶೈವ ಲಿಂಗಾಯತ ನೌಕರರ ಸಂಘದ ತಾಲೂಕಾಧ್ಯಕ್ಷ ಕಾಶಿನಾಥ ಇಮ್ಮಣ್ಣಿ, ಈರಣ್ಣ ಭೂತಪುರ, ಚಂದ್ರಶೇಖರ ಸೀರಿ, ನೀಲಕಂಠ ಅವಟಿ, ಬಂಡೆಪ್ಪ ಹಾಗರಗಿ, ನಿಂಗಣ್ಣ ಹಳಿಮನಿ, ಅಖಂಡೇಪ್ಪ ಎಂ ಕಲ್ಲಾ, ರಾಮು ತೊನಸಳ್ಳಿಕರ್ ಇದ್ದರು.