ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕ್ಷೇತ್ರದ ನಾಮವಷ್ಟೇ ಬದಲು ಅಭಿವೃದ್ಧಿಗೆ ಮಾತ್ರ ಪಂಗನಾಮ

Rashmi Kasaragodu
Updated On : 30 Mar 2013, 12:37 pm

ವಿಶೇಷ ವರದಿ
ಕನ್ನಡಪ್ರಭ ವಾರ್ತೆ   ರಾಯಚೂರು   ಮಾ.29
ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುವ ಕ್ಷೇತ್ರ. ಆದರೂ ಕುಡಿಯುವ ನೀರಿಗೆ ಪರದಾಟ. ಅಸಮರ್ಪಕ ರಸ್ತೆಗಳು, ಮೂಲಸೌಲಭ್ಯಗಳಿಗೆ ಕೊರತೆ ನಿರಂತರ. ಈ ಕ್ಷೇತ್ರದಿಂದ ಆಯ್ಕೆಯಾದ ಅನೇಕರು ಮಂತ್ರಿಗಳಾದರೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮಾತ್ರ ಅಷ್ಟಕ್ಕಷ್ಟೇ ಎಂಬ ಸಾರ್ವತ್ರಿಕ ಆರೋಪ.
ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಸದ್ಯದ ಸ್ಥಿತಿಯಿದು.
ರಾಜ್ಯದ ಶೇ.40ರಷ್ಟು ವಿದ್ಯುತ್ ಬೇಡಿಕೆ ನೀಗಿಸುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಲಕ್ಷಾಂತರ ಎಕರೆಗೆ ನೀರೊದಗಿಸುವ ನದಿಗಳಿದ್ದರೂ ಅಭಿವೃದ್ಧಿಯಲ್ಲಿ ತೀರಾ ಹಿಂದೆ ಬಿದ್ದಿರುವ ಕ್ಷೇತ್ರವಿದು. 1962 ರವರೆಗೆ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಭಾಗವಾಗಿದ್ದ ಈ ಪ್ರದೇಶವು ನಂತರದಲ್ಲಿ ಕಲ್ಮಲಾ ವಿಧಾನಸಭೆ ಕ್ಷೇತ್ರವಾಯಿತು.
ಪರಿಹಾರ ಕಾಣದ ಸಮಸ್ಯೆಗಳು: 2008ರ ಚುನಾವಣೆ ವೇಳೆಗೆ ಕ್ಷೇತ್ರ ಪುನವಿಂಗಡಣೆಯ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರ ಎನಿಸಿತು. ಇಂದಿನವರೆಗೆ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಅಷ್ಟಿಷ್ಟು ಪರಿಹಾರ ಕಂಡಿದ್ದು ಬಿಟ್ಟರೆ, ಇನ್ನುಳಿದಂತೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳು ಈಗಲೂ ಮುಂದುವರಿದಿವೆ.
ಸುಮಾರು ರಾಯಚೂರು ಮತ್ತು ಮಾನವಿ ತಾಲೂಕಿನ ಕೆಲ ಗ್ರಾಮಗಳೂ ಸೇರಿದಂತೆ ಒಟ್ಟು 191 ಗ್ರಾಮಗಳಲ್ಲಿ ವ್ಯಾಪಿಸಿ ಕೊಂಡಿರುವ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ಇದುವರೆಗೆ ಆಯ್ಕೆಯಾದವರಲ್ಲಿ ಬಹುತೇಕರು ಮಂತ್ರಿಗಳಾಗಿದ್ದಾರೆ. 1962ರಿಂದ ಇದುವರೆಗೆ ಈ ಕ್ಷೇತ್ರಕ್ಕೆ ನಡೆದ 11 ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಒಂದು ಬಾರಿ ಪಕ್ಷೇತರ, ಮೂರು ಬಾರಿ ದಳ ಪರಿವಾರದವರು ಶಾಸಕರಾಗಿದ್ದಾರೆ.
ಈ ಕ್ಷೇತ್ರದಿಂದ ಆಯ್ಕೆಯಾದವರಲ್ಲಿ ಬಿ.ಶಿವಣ್ಣ, ಸುಧೀಂದ್ರರಾವ್ ಕಸ್ಬೆ, ಮುನಿಯಪ್ಪ ಮುದ್ದಪ್ಪ ಹಾಗೂ ರಾಜಾ ಅಮರೇಶ್ವರ ನಾಯಕ ಅವರುಗಳು ಸಚಿವ ಸ್ಥಾನ ಅಲಂಕರಿಸಿದ್ದರು. ಆದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಇವರಿಂದ ಅಷ್ಟಾಗಿ ಸಾಧಿಸಲಾಗಲಿಲ್ಲ.
ನೀರಿನ ಸಮಸ್ಯೆ ತೀರಾ ಸಾಮಾನ್ಯ: 2008ರಲ್ಲಿ ಶಾಸಕರಾಗಿ ಕಾಂಗ್ರೆಸ್ನ ರಾಜಾ ರಾಯಪ್ಪ ನಾಯಕ ಆಯ್ಕೆಯಾದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಅವರು ಶಾಸಕರಾಗಿ ಮಾತ್ರ ಉಳಿದರು. ಪರಿಣಾಮ ಕ್ಷೇತ್ರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಸಾಮಾನ್ಯ.
ನದಿ ತೀರದ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನದಿ ಬತ್ತುತ್ತಿದ್ದಂತೆಯೇ ನೀರಿನ ಬವಣೆ ಆರಂಭಗೊಳ್ಳುತ್ತದೆ. ನದಿಗಳಿಂದ ನಿರಂತರ ಹಾಗೂ ಸಮರ್ಪಕ ನೀರೊದಗಿಸುವ ಪ್ರಯತ್ನಗಳು ಅನೇಕ ಗ್ರಾಮಗಳಲ್ಲಿ ಇದುವರೆಗೆ ಕೈಗೂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ವಸತಿ ಹಂಚಿಕೆ ನಡೆದಿಲ್ಲ: ಇನ್ನು 2009ರ ಪ್ರವಾಹ ಸಂದರ್ಭದಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿದಿದ್ದರಿಂದ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಸರ್ಕಾರದಿಂದ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಹಂಚಿಕೆ ಅನೇಕ ಕಡೆ ಈಗಲೂ ನಡೆದಿಲ್ಲ. ತುಂಗಭದ್ರಾ ಗ್ರಾಮದಲ್ಲಿ ಮನೆಗಳ ನಿರ್ಮಾಣ ತೀರಾ ತಡವಾಗಿ ಆರಂಭಗೊಂಡಿದ್ದರಿಂದ ಈಗಲೂ ಅವು ನಿರ್ಮಾಣ ಹಂತದಲ್ಲಿಯೇ ಇವೆ.
ಇನ್ನು ಪ್ರಸಕ್ತ ವರ್ಷ ಕೃಷ್ಣಾ ನದಿ ತೀರದ ಬುರ್ದಿಪಾಡ ಪುನರ್ವಸತಿ ಕಾಲನಿಯಲ್ಲಿ ನಿರ್ಮಿಸಿದ ಆಸರೆ ಮನೆಗಳ ಉದ್ಘಾಟನೆಗೆ ಕಾಯದೇ ಸಂತ್ರಸ್ತರೇ ಮನೆ ಪ್ರವೇಶಿಸಿದ ಘಟನೆಗಳೂ ನಡೆದಿವೆ. ಅದೇ ರೀತಿ ತಲಮಾರಿ ಗ್ರಾಮದಲ್ಲಿ ಮನೆಗಳ ನಿರ್ಮಾಣ ವಿಳಂಬದಿಂದ ಸಂತ್ರಸ್ತರು ಎರಡೂವರೆ ವರ್ಷದಿಂದ ಬಯಲಿನಲ್ಲಿಯೇ ವಾಸವಾಗಿರುವಂಥ ಸ್ಥಿತಿಗೆ ಸಿಲುಕಿದ್ದರು.
ಸಂಕಷ್ಟಗಳ ಸರಮಾಲೆ: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರವಿದ್ದರೂ ನಿರಂತರ ವಿದ್ಯುತ್ ಕಡಿತ ವರ್ಷವಡೀ ಜಾರಿಯಲ್ಲಿರುತ್ತದೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಈ ಕ್ಷೇತ್ರದೊಳಕ್ಕೆ ಅಕ್ರಮ ಹೆಂಡ, ಸಾರಾಯಿ ಮಾರಾಟ ನಿರಂತರವಾಗಿ ಸಾಗಿ ಬಡವರ ಬದುಕಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದ್ದರೂ ಕ್ರಮ ಜರುಗಿದ್ದು ಅಷ್ಟಕ್ಕಷ್ಟೇ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆಯ ಮೂಲಕ 80 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶಗಳಿದ್ದರೂ, ಅದರ ಬಗ್ಗೆ ಜನಪ್ರತಿನಿಧಿಗಳದ್ದು ಎಂದಿನಂತೆಯೇ ನಿರ್ಲಕ್ಷ್ಯವೇ ಉತ್ತರ ಎಂಬಂಥ ಸ್ಥಿತಿ. ಹೀಗಾಗಿ ಕಲ್ಮಲಾ ವಿಧಾನಸಭೆ ಕ್ಷೇತ್ರವು ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರವಾಗಿ ಹೆಸರು ಬದಲಾದರೂ ಅಭಿವೃದ್ಧಿಯಲ್ಲಿ ಮಾತ್ರ ಪ್ರಗತಿ ಮರೀಚಿಕೆಯೇ ಆಗಿದೆ ಎಂಬುದು ಕ್ಷೇತ್ರದ ಜನತೆಯ ಅಸಮಾಧಾನದ ಮಾತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement