ಜಿಲ್ಲಾದ್ಯಂತ ಸಿಪಿಎಂ ಸ್ಪರ್ಧೆ ಖಚಿತ: ಮೇದಾರ
ಮಸ್ಕಿ: ದುಡಿಯುವ ಜನರ ಪರವಾಗಿ ಹೋರಾಡುತ್ತಿರುವ ಸಿಪಿಎಂ, ದುಡಿಯುವ ಜನರನ್ನು ಪ್ರತಿನಿಧಿಸಿ ನೋಂದಾಯಿತ ಪಕ್ಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಮೇದಾರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಸ್ಕಿ ಕ್ಷೇತ್ರ ಸೇರಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಆಕಾಂಕ್ಷಿಗಳ ಪಟ್ಟಿಯನ್ನು ಈಗಾಗಲೇ ರಾಜ್ಯ ಸಮಿತಿಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಗರಾಜ ಮೇದಾರ, ಸಿದ್ದಪ್ಪ ನಾಯಕ, ತಿಮ್ಮಣ್ಣ ನಾಯಕ ಸಾಗರ ಕ್ಯಾಂಪ್, ಮುತ್ತಣ್ಣ ನಾಯಕ ಮತ್ತಿತರ ಆಕಾಂಕ್ಷಿಗಳ ಹೆಸರು ಶಿಫಾರಸು ಮಾಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಪಕ್ಷದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.