ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾಲೂಕಿನ ಜನತೆಗೆ ಶಾಸಕ ವಜ್ಜಲ್ ಮೋಸ

Rashmi Kasaragodu
Updated On : 30 Mar 2013, 12:38 pm

ಕನ್ನಡಪ್ರಭ ವಾರ್ತೆ, ಮುದಗಲ್, ಮಾ.29
ತಾಲೂಕಿನ ಜನತೆಗೆ ನೀರಾವರಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ಮೋಸ ಮಾಡಿದ ಮೊದಲ ಶಾಸಕ ಮಾನಪ್ಪ ವಜ್ಜಲ್ ಎಂದು ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ನಂದವಾಡಗಿ ಏತ ನೀರಾವರಿ ಯೋಜನೆ ಜಾರಿ ಕುರಿತು ಹೇಳಿಕೆ ನೀಡಿ, ತಾವೇ ಜಾರಿಗೆ ತಂದಿರುವುದಾಗಿ ಹೇಳುತ್ತಿರುವುದು ನಾಚಿಕೆಗೇಡು. ತಾಲೂಕಿನ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ಮಠಾಧೀಶರು, ಪತ್ರಕರ್ತ ಹೋರಾಟದಿಂದಾಗಿ ಸರ್ಕಾರದ ಗಮನಕ್ಕೆ ತಂದಿದ್ದರಿಂದ ಯೋಜನೆ ಜಾರಿಯಾಗಿದೆ. ಆದರೆ ಶಾಸಕರು ಯೋಜನೆ ಪೂರ್ಣಗೊಳಿಸಲು ಶ್ರಮಿಸದೆ ಯೋಜನೆಗೆ ತಿಲಾಂಜಲಿ ನೀಡಿದ್ದಾರೆ ಎಂದರು.
ಕೋಟಿ ಕೋಟಿ ಹಣ ಲೂಟಿ?: ಯೋಜನೆ ಬಗ್ಗೆ ಸುಳ್ಳು ಹೇಳುವ ಮೂಲಕ ಜನತೆಗೆ ವಂಚಿಸಿದ್ದಾರೆ, ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಪ್ರಸಕ್ತ ಚುನಾವಣೆಯಲ್ಲಿ ಜನರ ಮುಂದೆ ಮತಯಾಚನೆ ಮಾಡಲು ಯಾವ ಮುಖ ಹೊತ್ತು ಹೋಗುತ್ತಾರೆ ಎಂದು ಲೇವಡಿ ಮಾಡಿದರು. ಸರ್ಕಾರದಿಂದ ಬಂದಂತ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದರು.
ಮತದಾರರಿಂದಲೇ ತಕ್ಕ ಪಾಠ: ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಜನರ ಸೇವೆ ಮಾಡಿರುವ ತಾವು ಜನರಿಗೆ ಚಿರಪರಿಚಿತರಾಗಿದ್ದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮಂತ್ರಿ ಬಸವರಾಜ ಪಾಟೀಲ್ ಅನ್ವರಿಯವರು ತಮಗೆ ಕೆಜೆಪಿಯಿಂದ ಸ್ಪರ್ಧಿಸಲು ಸೂಚಿಸಿದ್ದರಿಂದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಣದಲ್ಲಿದ್ದೇನೆ. ತಾಲೂಕಿನ ಮತದಾರರು ಪ್ರಬುದ್ಧರಾಗಿದ್ದಾರೆ. ಹಣವಂತರಿಗೆ, ದೇಶದ ಸಂಪತ್ತು ಲೂಟಿ ಮಾಡಿದ ಜನರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದರು.
ಸಂಪತ್ತಿಗೆ ಸವಾಲ್: ಪ್ರಸಕ್ತ ಚುನಾಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಕೋಟ್ಯಾಧೀಶ್ವರನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಚುನಾವಣೆಯಲ್ಲಿ ಸಾಮಾನ್ಯ ವ್ಯಕ್ತಿಯಾದ ನಾನು ಸಂಪತ್ತಿಗೆ ಸವಾಲು ಹಾಕಿದ್ದೇನೆ. ತಾಲೂಕಿನ ಜನತೆ ಹಣಕ್ಕಾಗಿ ವೋಟು ಹಾಕುವವರಲ್ಲ, ಎಷ್ಟೇ ಹಣ ನೀಡಿದರೂ ಅದನ್ನು ಪಡೆದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲೇ ರಾಜಕೀಯ ಮುಖಂಡರನ್ನು ಹುಟ್ಟು ಹಾಕುವ ಕೇಂದ್ರ ಎಂದು ಹೆಸರಾಗಿರುವ ತಾಲೂಕಿನ ಜನತೆ ತಮಗೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement