ಪಕ್ಷ ವಿರೋಧಿ ಚಟುವಟಿಕೆ ಆರೋಪ; ಕ್ರಮಕ್ಕೆ ಆಗ್ರಹ
ರಾಯಚೂರು: ನಗರಸಭೆಯ ಚುನಾವಣೆಯಲ್ಲಿ ನಗರದ ವಾರ್ಡ್ ಸಂಖ್ಯೆ 27ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಮ್ಮ ಸೋಲಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎ. ಪಾಪಾರೆಡ್ಡಿ ಅವರೇ ಕಾರಣರಾಗಿದ್ದು ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಇಲ್ಲಿನ ನಗರಸಭೆಯ ಮಾಜಿ ಸದಸ್ಯ ನಲ್ಲಾರೆಡ್ಡಿ ದೂರಿದ್ದಾರೆ. ಈ ಕುರಿತು ಅವರು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರಿಗೆ ದೂರು ಸಲ್ಲಿಸಿ, ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ತಾವು ಸ್ಪರ್ಧಿಸಿದ್ದು, ಪ್ರಚಾರ ಸಂದರ್ಭದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ವೀರೇಶ್ ಎಂಬುವವರ ಪರ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಸೋಲಿಗೆ ಅವರೇ ಕಾರಣರಾಗಿದ್ದಾರೆಂದು ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸುವ ದೃಷ್ಟಿಯಿಂದ ಕೂಡಲೇ ಮಾಜಿ ಶಾಸಕ ಪಾಪಾರೆಡ್ಡಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.