ಬೀಳ್ಕೊಡುಗೆ ಸಮಾರಂಭ
ರಾಯಚೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾ. 30ರಂದು ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಅಂದು ನಗರದ ಕಾಲೇಜಿನ ನೂತನ ಕಟ್ಟಡದ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಿಪಾಲ ರೆಡ್ಡಿ ಪಾಟೀಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ವಿವಿ ಪ್ರಾಧ್ಯಾಪಕಿ ಡಾ. ಜಾಗೃತಿ ದೇಶಮಾನೆ, ಸಿಪಿಐ ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕ ಪ್ರೊ. ಎಂ.ಪಾಂಡುರಂಗ ಪಾಲ್ಗೊಳ್ಳಲಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ನಾಳೆ ವೈದ್ಯಕೀಯ ಸೇವೆ ಉಚಿತ
ಲಿಂಗಸ್ಗೂರು: ಶಿರಡಿ ಸಾಯಿ ಸೇವಾ ಮಂದಿರದಲ್ಲಿ ಶ್ರೀಸಾಯಿ ಆರೋಗ್ಯ ಸಂಜೀವಿನಿ ವತಿಯಿಂದ ಮಾ.31ರಂದು ಸಂಜೆ 6.30ಕ್ಕೆ ಉಚಿತ ವೈದ್ಯಕೀಯ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಶಿರಡಿ ಸಾಯಿ ಸಮಿತಿ ಮನವಿ ಮಾಡಿದೆ. ಆರೋಗ್ಯದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಶಿರಡಿ ಸಾಯಿ ಸಮಿತಿ ವತಿಯಿಂದ ಶ್ರೀಸಾಯಿ ಸಂಜೀವಿನಿ ಹೆಸರಿನಡಿ ಪ್ರತಿ ಭಾನುವಾರ ನುರಿತ ವೈದ್ಯರಿಂದ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹಕಾರ ನೀಡಲಿದ್ದು, ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕೆಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.
'ಬಡಾವಣೆಗೆ ಸೌಲಭ್ಯ ಕಲ್ಪಿಸಿ'
ರಾಯಚೂರು: ಇಲ್ಲಿನ ನೇತಾಜಿ ನಗರ ಬಡಾವಣೆಯ ವ್ಯಾಪ್ತಿಯ ದಲಿತರು ವಾಸವಾಗಿರುವ ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಡಾ. ಅಂಬೇಡ್ಕರ್ ಯುವಕ ಸಂಘ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಚೆಗೆ ಮನವಿ ಸಲ್ಲಿಸಿ, ದಲಿತರು ವಾಸವಾಗಿರುವ ಪ್ರದೇಶದಲ್ಲಿ ಸಾರ್ವಜನಿಕ ಸ್ತ್ರೀಯರ ಮತ್ತು ಪುರುಷರ ಶೌಚಾಲಯಗಳಿದ್ದು ದುಸ್ಥಿತಿಯಲ್ಲಿವೆ. ಅವುಗಳನ್ನು ಶೇ.22.75 ಅನುದಾನದಲ್ಲಿ ನಿರ್ಮಿಸಬೇಕು. ಪುರಾತನ ರಾಜಾ ಕಾಲುವೆಯನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು. ದಲಿತರ ಬಡಾವಣೆಗೆ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಬೇಕು. ದಲಿತರ ಬಡಾವಣೆಯಲ್ಲಿ ಕಾಲುವೆಗಳನ್ನು ಸ್ವಚ್ಛಳಿಸಬೇಕು. ಕಸ ತೆರವುಗೊಳಿಸಬೇಕು ಎಂಬುದು ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಎಸ್.ಸುಭಾಷ್, ಕಾರ್ಯದರ್ಶಿ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಪರಶುರಾಮ್ ಇದ್ದರು.