ರಸ್ತೆ-ಚರಂಡಿ ಕಾರ್ಯಕ್ಕೆ ವಾಹನಗಳ ಅಡ್ಡಿ, ಪರದಾಟ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.29
ಪಟ್ಟಣದಲ್ಲಿ ರಾಜ್ಯ ಹೆದ್ದಾರಿ (19) ರಸ್ತೆ ಅಗಲೀಕರಣ ಮತ್ತು ರಸ್ತೆ ಎರಡು ಬದಿ ಕಾಲುವೆ ನಿರ್ಮಿಸಲಾಗುತ್ತಿದೆ. ಆದರೆ ಸಾರ್ವಜನಿಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಕಾಮಗಾರಿ ಕೈಗೊಳ್ಳುವ ಕೆಲಸಗಾರರಿಗೆ ಮತ್ತು ಯಂತ್ರಗಳಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಲೋಕೋಪಯೋಗಿ ಇಲಾಖೆಯಿಂದ ಸುಮಾರು ರು. 1.50 ಕೋಟಿ ವೆಚ್ಚದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ (ಎಸ್.ಎಚ್.19) ಹಾಗೂ ರಾಯಚೂರು-ಬಾಚಿ (ಎಸ್.ಎಚ್.20) ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಅಮರೇಶ್ವರ ಮಕ್ಕಳ ಆಸ್ಪತ್ರೆಯಿಂದ ಶಾಸಕರ ಸರ್ಕಾರಿ ಮಾದರಿ ಶಾಲೆವರೆಗೆ 2 ಮೀಟರ್ ಅಗಲ, 0.9 ಮೀಟರ್ ಆಳದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಒಂದು ಬದಿ ರಸ್ತೆ ನಿರ್ಮಿಸಲಾಗಿದ್ದು, ಚರಂಡಿ ಕೆಲಸ ನಡೆದಿದೆ. ಇನ್ನೊಂದು ಬದಿ ರಸ್ತೆ ಕಾಮಗಾರಿ ಕೈಗೊಳ್ಳಲು ಅಗೆಯಲಾಗಿದೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ.
ಸಂಚಾರ-ಸಂಚಕಾರ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ರಸ್ತೆಯ ಎರಡೂ ಬದಿಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಅಗೆದರು. ಪರಿಣಾಮ ನೂರಾರು ವಾಹನಗಳು, ಸಾರ್ವಜನಿಕರ ಸಂಚಾರ ಇದೇ ರಸ್ತೆಯ ಮೇಲೆ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಅಲ್ಲದೆ ರಸ್ತೆಯ ಅಕ್ಕಪಕ್ಕದಲ್ಲಿರುವ ಖಾಸಗಿ ಹೋಟೆಲ್, ವಸತಿ ಗೃಹ, ಕಬ್ಬಿಣದ ಅಂಗಡಿ, ಕಿರಾಣಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಖಾಸಗಿ ವಾಹನಗಳು ದುರಸ್ತಿಗಾಗಿ ಗ್ಯಾರೇಜಿಗೆ ತಂದು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ವಾಹನಗಳ ದಟ್ಟಣೆಗೊಂಡು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ.
ಅಂಕುಡೊಂಕು ಚರಂಡಿ: ರಾಜ್ಯ ಹೆದ್ದಾರಿ ಮಧ್ಯ ಭಾಗದಿಂದ 15 ಮೀಟರ್ ಅಳತೆ ಕೈಗೊಂಡು ಅಕ್ರಮ ಕಟ್ಟಡಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ. ಅದರಂತೆ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ ಚರಂಡಿ ಕಾಮಗಾರಿ ವೈಜ್ಞಾನಿಕವಾಗಿ ನಿರ್ಮಿಸದೆ ಅಂಕು-ಡೊಂಕಾಗಿ ನಿರ್ಮಿಸಲಾಗುತ್ತಿದೆ. ಕೂಡಲೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗಮನಹರಿಸಬೇಕೆಂಬುದು ಸಾರ್ವಜನಿಕರ ಸಾರ್ವಜನಿಕರ ಒತ್ತಾಸೆಯಾಗಿದೆ.