ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂದು ಪಿಯುಸಿ ಫೇಲ್ಡ್..ಇಂದು ಬಿಎಸ್ಸಿಯಲ್ಲಿ ಗೋಲ್ಡ್

Rashmi Kasaragodu
Updated On : 31 Mar 2013, 1:24 am

ರಾಯಚೂರು: ವಿದ್ಯಾರ್ಥಿ ಬದುಕಿನಲ್ಲಿ ಸಾಧಿಸುವ ಛಲವಿದ್ದರೆ ಸಾಕು ಯಾವುದೇ ಪದವಿ ಪಡೆಯುವುದು ಕಷ್ಟವಲ್ಲ ಎಂಬುದಕ್ಕೆ ಶಹಾಪುರದ ಬೀರನೂರು ಗ್ರಾಮದ ಮಲ್ಲಾರೆಡ್ಡಿಯೇ ಸಾಕ್ಷಿ. ಪಿಯುಸಿ ದ್ವಿತೀಯ ಜೀವಶಾಸ್ತ್ರದಲ್ಲಿ ಫೇಲಾಗಿದ್ದಾತ ಇಂದು 6 ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ.
ನಗರದ ಕೃಷಿ ವಿವಿಯಲ್ಲಿ ಶನಿವಾರ ನಡೆದ ವಿವಿಯ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಮಲ್ಲಾರೆಡ್ಡಿಯದ್ದು ರೈತ ಕುಟುಂಬ. ತಂದೆ ಕೃಷಿಕರು. ಕುಟುಂಬದ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಬದುಕು ಕಂಡವರು.
ಹೀಗಾಗಿ ಸಹಜವಾಗಿಯೇ ಕೃಷಿ ಸಂಬಂಧಿ ಅಧ್ಯಯನದಲ್ಲಿ ಆಸಕ್ತಿಯಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಮಲ್ಲಾರೆಡ್ಡಿ ಫೇಲಾಗಿದ್ದು ಹಿನ್ನಡೆಯಾಯಿತು. ಆದರೆ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ಪಿಯುಸಿ ಉತ್ತೀರ್ಣಗೊಂಡು ಮುಂದೆ ಕೃಷಿ ಪದವಿ ಸೇರಿಕೊಂಡರು. ನಿರಂತರ ಅಧ್ಯಯನ, ಕುಟುಂಬದ ಬೆಂಬಲ, ಬೋಧಕ ವರ್ಗದ ಸಹಕಾರದಿಂದ 6 ಚಿನ್ನದ ಪದಕ ಪಡೆದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಅನಿಸಿಕೆ ಹಂಚಿಕೊಂಡ ಅವರು, ಪದಕ ಪಡೆದಿದ್ದು ಸಂತಸ ತಂದಿದೆ. ಕೃಷಿಕರಿಗೆ ನೆರವಾಗುವ ಮನಸ್ಸಿದೆ. ಜತೆಗೆ ಸಾವಯವ ಕೃಷಿಯತ್ತ ಒಲವೂ ಇದೆ. ಹೀಗಾಗಿ ಸದ್ಯ ಬೆಂಗಳೂರಿನ ಜಿಕೆವಿಕೆಯಲ್ಲಿ ಅಗ್ರಾನಮಿಯಲ್ಲಿ ಎಂಎಸ್ಸಿ ಮಾಡುತ್ತಿರುವುದಾಗಿ ತಿಳಿಸಿದರು.
ತಾವು ಈ ಸಾಧನೆ ಮೆರೆಯುವಲ್ಲಿ ಕುಟುಂಬದವರ ಕೊಡುಗೆ ಅಪಾರ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ನೆಲೆಸಿ ಕೃಷಿಕರಿಗೆ ಅನುಕೂಲಕರ ವೈಜ್ಞಾನಿಕ ಸಲಹೆ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement