ಖಾತ್ರಿ ಕನಿಷ್ಠ ಕೂಲಿ ನೀಡಿಕೆಗೆ ಕೂಲಿಕಾರರ ಒತ್ತಾಯ
ಕನ್ನಡಪ್ರಭವಾರ್ತೆ, ಲಿಂಗಸ್ಗೂರು, ಮಾ.30
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗೆ ಕನಿಷ್ಠ ಕೂಲಿ ನೀಡುವಂತೆ ಮಲ್ಲಾಪುರ ಗ್ರಾಮದ ಕೂಲಿಕಾರರು ತಾಪಂ ಅಧಿಕಾರಿಗಳಿಗೆ ಒತ್ತಾಯಿಸಿದರು.
ತಾಲೂಕಿನ ರೋಡಲಬಂಡಾ (ತವಗ) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತಲು 1,22,140 ನಿಗದಿಪಡಿಸಲಾಗಿದೆ. ಕೆರೆ ಹೂಳೆತ್ತಲು 66 ಜನ ಕೂಲಿಕಾರರು ಕೆಲಸ ಕೈಗೊಳ್ಳಲಾಗಿದೆ.
ಆದರೆ ಗ್ರಾಪಂ ಅಧಿಕಾರಿಗಳು ಕಾಮಗಾರಿ ಸ್ಥಳ ಪರಿಶೀಲನೆ ನಡೆಸದೆ ಕಾಮಗಾರಿಗೆ ತಕ್ಕಂತೆ ಕನಿಷ್ಠ ಕೂಲಿ ಹಣ ನೀಡದೆ ಪ್ರತಿಯೊಬ್ಬ ಕೂಲಿಕಾರರಿಗೆ ಪ್ರತಿದಿನ 55 ನಂತೆ ಒಟ್ಟು 66 ಜನ ಕೂಲಿಕಾರರಿಗೆ 43 ಸಾವಿರ ನಿಗದಿ ಮಾಡಲಾಗಿದೆ.
ಇದರಿಂದ ಕೂಲಿಕಾರರಿಗೆ ಅನ್ಯಾಯವಾಗಲಿದೆ. ಕೂಡಲೇ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕೂಲಿಕಾರರ ಸಂಘ (ಗ್ರಾಕೂಸ್)ದ ನೇತೃತ್ವದಲ್ಲಿ ತಾಪಂ ಅಧಿಕಾರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಸಂಸ್ಥೆಯ ತಾರಕೇಶ್ವರಿ, ಗುಂಡಪ್ಪ, ಅಮರೇಶ, ನರಸಪ್ಪ, ಕೂಲಿಕಾರರಾದ ಗುಂಡಮ್ಮ, ರಸೂಲಬಿ, ದೇವಮ್ಮ, ಗುಂಡಮ್ಮ, ಶರಣಮ್ಮ, ಸರಸ್ವತಿ ಸೇರಿದಂತೆ ಇನ್ನಿತರರು ಇದ್ದರು.