ರೈತರಲ್ಲಿ ಪ್ರೀತಿ, ಅಭಿಮಾನವಿರಲಿ
ಸಿಂಧನೂರು: ವಿದ್ಯಾರ್ಥಿಗಳು ಪದವಿ ಹೊಂದಿದ ನಂತರ ಕೃಷಿಯತ್ತ ಆಸಕ್ತಿ ಹೊಂದಿ ಉತ್ತಮ ಕೃಷಿಕರಾಗಬೇಕು.
ನಾವೆಲ್ಲ ರೈತರನ್ನು ಪ್ರೀತಿ ಅಭಿಮಾನದಿಂದ ಕಾಣಬೇಕು, ರೈತರ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ ಡಾ.ರಾಜಕುಮಾರ ಅವರು ಅಭಿನಯಿಸಿದ್ದ ಬಂಗಾರದ ಮನುಷ್ಯ ಸಿನಿಮಾ ನೋಡಿದ ಅದೆಷ್ಟೋ ಜನರು ವಿದ್ಯಾವಂತರು ಹಾಗೂ ನೌಕರಸ್ಥರು ಕೃಷಿಯ ಕಡೆಗೆ ಆಸಕ್ತಿ ವಹಿಸಿದ್ದರು.
ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಮುದಾಯ ಸ್ಪಂದಿಸಿದರೆ ಗ್ರಾಮೀಣ ಅಭಿವೃದ್ಧಿಯಾಗಲು ಸಾಧ್ಯವೆಂದು ಜವಳಗೇರಾ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಎನ್ಎಸ್ಎಸ್ ವಿಭಾಗೀಯ ಸಂಯೋಜನಾಧಿಕಾರಿ ಎಸ್. ಶಿವರಾಜ ಅಭಿಪ್ರಾಯಪಟ್ಟರು.
ನಗರದ ವಿಜಡಮ್ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿ.ರಾಜಾರಾಮರಾವ್ ನಾಡಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಕುರಿತು ಉಪನ್ಯಾಸ ನೀಡಿದರು.
ಕೃಷಿಗೆ ಹೆಚ್ಚಿನ ಗಮನ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮಾತನಾಡಿ, ಕೃಷಿ ಒಂದು ಉದ್ಯಮವಾಗಬೇಕು. ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಹೊಸ ಆಧುನಿಕ ಪದ್ಧತಿಯಲ್ಲಿ ಕೃಷಿಯನ್ನು ನಿರ್ವಹಿಸುವುದರ ಜೊತೆಗೆ ವಿದ್ಯಾವಂತರು ಕೃಷಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಕೃಷಿಯಲ್ಲಿ ಸಂಶೋದನಾ ಪ್ರವೃತ್ತಿ ಹೆಚ್ಚಾಗಬೇಕೆಂದರು.
ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷೆ ಸುವರ್ಣಾ ಹೆಚ್.ಶೇಠ್ ಮಾತನಾಡಿ, ವಿದ್ಯಾವಂತರೆಲ್ಲ ಉದ್ಯೋಗ ಮಾಡಬೇಕೆಂಬ ಭಾವನೆದೂರಾಗಿ ಕೃಷಿಯತ್ತ ಒಲವು ತೋರಿಸಬೇಕೆಂದು ಸಲಹೆ ನೀಡಿದರು.
ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಬಾಬರ್ ಬೇಗ್ ಮಾತನಾಡಿ, ವಿದ್ಯಾರ್ಥಿಗಳು ಹೃದಯ ವೈಶಾಲತೆ ಬೆಳೆಸಿಕೊಂಡು ಒಳ್ಳೆಯ ಮಾರ್ಗದಲ್ಲಿ ಸಾಗಬೇಕೆಂದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ದತ್ತಿ ಉಪನ್ಯಾಸ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜಡಮ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಅನಿಲಕುಮಾರ ಮಾತನಾಡಿ, ಕೃಷಿ ಬಗ್ಗೆ ಉದಾಸೀನತೆ ಸಲ್ಲದು. ಸುಸ್ಥಿರ ಅಭಿವೃದ್ಧಿಗೆ ಮುಂದಾಗಬೇಕೆಂದರು. ಸಂಸ್ಥೆಯ ಅಧ್ಯಕ್ಷ ಸಿ.ಕೆ.ರಾಜಣ್ಣ ಇದ್ದರು. ಕುಮಾರಿ ಶ್ವೇತಾ ಎಸ್. ಪ್ರಾರ್ಥಿಸಿದರು. ಬೀರಪ್ಪ ಶಂಭೋಜಿ ಸ್ವಾಗತಿಸಿದರು. ಅರವಿಂದ ಗೊಂದಿ ವಂದಿಸಿದರು. ಉಪನ್ಯಾಸಕ ಬಸವರಾಜ ನಿರೂಪಿಸಿದರು.