ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾರ್ಥಿಗಳಿಗೆ ಮಾಜಿ ರಾಷ್ಟ್ರಪತಿ ವಿಜ್ಞಾನ ಪಾಠ

Rashmi Kasaragodu
Updated On : 31 Mar 2013, 1:24 am

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.30
ಸೌರಮಂಡಲದ ಉಳಿದ ಗ್ರಹಗಳಲ್ಲಿಯೂ ಜೀವಿಗಳಿದ್ದಾರೆಯೇ.. ದೇಶ ಅಭಿವೃದ್ಧಿ ಪಥದಲ್ಲಿಯೇ... ಏಕರೂಪ ಶಿಕ್ಷಣ ಪದ್ಧತಿ ಜಾರಿ ದೇಶದಲ್ಲಿ ಸಾಧ್ಯವಿಲ್ಲವೇ...?
- ಇಂಥ ಪ್ರಶ್ನೆಗಳ ಸುರಿಮಳೆ ನಗರದಲ್ಲಿ ಶನಿವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾಗೃಹದಲ್ಲಿ ಸೈನ್ಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಕಲಾಂ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಬಂದವು.
ಇನ್ನಷ್ಟು ಸಂಶೋಧನೆ ಅಗತ್ಯ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅಕ್ಷರಶಃ ಶಾಲಾ ಮೇಷ್ಟ್ರ ಆಗಿದ್ದರು. ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಪರೀಕ್ಷಿಸುತ್ತಲೇ ಸಂವಾದ ನಡೆಸಿದರು.
  ವಿದ್ಯಾರ್ಥಿಗಳಿಗೆ ಮರುಪ್ರಶ್ನೆ ಹಾಕುತ್ತಾ ಅವರಿಂದಲೇ ಉತ್ತರ ಹೇಳಿಸುತ್ತಾ ಸಂವಾದ ನಡೆಸಿದ ಅವರು, ವಿದ್ಯಾರ್ಥಿನಿ ಅನನ್ಯಾ, ಸೌರಮಂಡಲದ ಉಳಿದ ಗ್ರಹಗಳಲ್ಲಿ ಜೀವಿಗಳಿದ್ದಾರೆಯೇ ಎಂದು ಪ್ರಶ್ನಿಸಿದಾಗ ಕಲಾಂ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯ. ಸದ್ಯದ ಸ್ಥಿತಿಯಲ್ಲಿ ಕೆಲ ಗ್ರಹಗಳಲ್ಲಿ ಮಾನವ ಜೀವನ ನಡೆಸುವುದು ಅಸಾಧ್ಯ ಎಂಬಂಥ ಪರಿಸರ ಇದೆ. ಹೀಗಾಗಿ ಉಳಿದ ಗ್ರಹಗಳಲ್ಲಿ ಜೀವಿಗಳ ಇರುವಿಕೆ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಜಿಡಿಪಿ ಶೇ.9ಕ್ಕೆ ತಲುಪಬೇಕು..: ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಹೇಳಿಕೊಳ್ಳಲು ಹೊರಟಿದೆ. ನಿಜವಾಗಿಯೂ ದೇಶವು ಅಭಿವೃದ್ಧಿ ಪಥದಲ್ಲಿದೆಯೇ ಎಂದ ವಿದ್ಯಾರ್ಥಿ ವೀರೇಶ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2020ರ ವೇಳೆಗೆ ದೇಶದ ಆರ್ಥಿಕ ಪ್ರಗತಿಯನ್ನು ಕಾಣಬೇಕಿದೆ.
 ಜಿಡಿಪಿ ದರವು ಕನಿಷ್ಠ ಶೇ.9ಕ್ಕೆ ತಲುಪಬೇಕಿದೆ. ಸದ್ಯ ಜಿಪಿಡಿ ಶೇ. 5ಆಗಿದ್ದು ಸಾಧನೆಗೆ ಇನ್ನೂ 7 ವರ್ಷ ಅವಕಾಶವಿದೆ ಎಂದು ಹೇಳಿದರು.
ಏಕರೂಪ ಶಿಕ್ಷಣ ಜಾರಿ ಅವಶ್ಯ: ವಿದ್ಯಾರ್ಥಿ ರಾಹುಲ್ ಸಿಂಗ್ ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿ ಏಕೆ ಜಾರಿಯಾಗಬಾರದು ಎಂಬ ಪ್ರಶ್ನೆ ಕಲಾಂ ಅವರ ಮುಂದಿರಿಸಿದಾಗ ಅದಕ್ಕೆ ಸಹಮತ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವುದು ಅವಶ್ಯ.
 ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಶಿಕ್ಷಣ ನೀಡಿಕೆಯಿಂದ ವಿದ್ಯಾರ್ಥಿಗಳ ಪ್ರಗತಿಗೆ ನೆರವಾಗುತ್ತಿಲ್ಲ ಎಂದುಹೇಳಿದರು.
2030ರ ವೇಳೆಗೆ ದೇಶ ವಿಶ್ವಕ್ಕೆ ಮಾದರಿ: ದೇಶ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆ ಮೆರೆದಿದೆ. ಮಾನವರಹಿತ ಅನೇಕ ಉಪಗ್ರಹಗಳನ್ನು ದೇಶದ ವಿಜ್ಞಾನಿಗಳು ಈಗಾಗಲೇ ಸೌರಮಂಡಲಕ್ಕೆ ಕಳಿಸಿದ್ದಾರೆ.
 ಆದರೆ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಧ್ಯಯನಕ್ಕೆ ಉಪಗ್ರಹದಲ್ಲಿ ಕಳಿಸುವುದು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಡಾ. ಕಲಾಂ ಪ್ರತಿಕ್ರಿಯಿಸಿ, 2030ರ ವೇಳೆಗೆ ವಿಶ್ವಕ್ಕೆ ಮಾದರಿ ಎನಿಸುವ ಉಪಗ್ರಹಗಳು ದೇಶದಲ್ಲಿ ಅಭಿವೃದ್ಧಿಯಾಗಲಿವೆ.
  ಅಷ್ಟೇ ಅಲ್ಲ ಖಗೋಳ ಶಾಸ್ತ್ರಜ್ಞರು ಸೌರಮಂಡಲಕ್ಕೆ ಆ ವೇಳೆ ಪ್ರಯಾಣಿಸುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಭ್ರಷ್ಟಾಚಾರ ನಿರ್ಮೂಲನೆ, ಪ್ರಾಮಾಣಿಕತೆ ಮೂಲಕ ದೇಶದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕಿದೆ.
 ಆತ್ಮಸ್ಥೈರ್ಯ, ದೃಢ ನಿರ್ಧಾರದಿಂದ ಸಾಧನೆ ಮೆರೆಯುವುದು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement