ಶುದ್ಧ ಕುಡಿವ ನೀರಿಗೆ ಆಗ್ರಹ
ರಾಯಚೂರು: ತಾಲೂಕಿನ ಉಡುಮಗಲ್ ಖಾನಾಪೂರ ಗ್ರಾಮದ ದಲಿತರ ಕಾಲನಿಗೆ ಫ್ಲೋರೈಡ್ ಮಿಶ್ರಿತ ನೀರು ಒದಗಿಸುತ್ತಿದ್ದು, ಕೂಡಲೇ ಶುದ್ಧ ಕುಡಿಯುವ ನೀರೊದಗಿಸುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ಗ್ರಾಮಸ್ಥರು ಧರಣಿ ನಡೆಸಿದರು.
ಅನಾರೋಗ್ಯ: ಜಿಲ್ಲಾಧಿಕಾರಿಗಳಿಗೆ ಈ ವೇಳೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಕಳೆದ ಅನೇಕ ವರ್ಷಗಳಿಂದ ಗ್ರಾಮದ ದಲಿತರು ವಾಸವಾಗಿರುವ ಪ್ರದೇಶಕ್ಕೆ ಕೊಳವೆ ಬಾವಿಗಳ ಮೂಲಕ ನೀರೊದಗಿಸಲಾಗುತ್ತಿದೆ. ಆದರೆ ಕೊಳವೆಬಾವಿಗಳಿಂದ ಫ್ಲೋರೈಡ್ ಮಿಶ್ರಿತ ನೀರು ದೊರೆಯುತ್ತಿದ್ದು, ಅದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಿದೆ ಎಂದು ಆರೋಪಿಸಿದರು. ಫ್ಲೋರೈಡ್ ಮಿಶ್ರಿತ ನೀರು ಸೇವನೆಯಿಂದ ಕೀಲು ನೋವು, ಕಿಡ್ನಿ ಸಮಸ್ಯೆ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಅನೇಕರು ಈ ರೋಗಗಳಿಂದ ಬಳಲಿ ಸಾವಿಗೀಡಾಗಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಅನೇಕ ಸಲ ದೂರಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕ್ರಮ ಅಗತ್ಯ: ಗ್ರಾಮದಲ್ಲಿ ದಲಿತರು ವಾಸವಾಗಿರುವ ಬಾಪೂಜಿ ಕಾಲನಿಯಲ್ಲಿ ಮಾತ್ರ ಫ್ಲೋರೈಡ್ ನೀರಿನ ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ದಲಿತರಿಗೆ ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಕೆರೆ ಇಲ್ಲವೇ ಬೇರೆಡೆಯಿಂದ ಶುದ್ಧ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮದಲ್ಲಿ ಫ್ಲೋರೈಡ್ ಮಿಶ್ರಿತ ನೀರಿನ ಸೇವನೆಯಿಂದ ಅನಾರೋಗ್ಯಕ್ಕೀಡಾಗಿ ಸಾವಿಗೀಡಾದವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಬೇಕು. ದಲಿತರು ವಾಸವಾಗಿರುವ ಕಾಲನಿಗೆ ಶುದ್ಧ ನೀರೊದಗಿಸುವಂತೆ ಆಗ್ರಹಿಸಿದರು.
ಧರಣಿಯಲ್ಲಿ ಗ್ರಾಮದ ಮುಖಂಡರಾದ ತಾಯಪ್ಪ ಭಂಢಾರಿ ವಕೀಲರು, ಭೀಮಪ್ಪ ವಕೀಲರು, ಲಕ್ಷ್ಮಪ್ಪ ವಕೀಲರು, ತಿಪ್ಪಣ್ಣ, ಶಾಂತಪ್ಪ, ನರಸಪ್ಪ ಭಂಡಾರಿ, ಯಲ್ಲಮ್ಮ, ಮಾರೆಮ್ಮ ಸೇರಿದಂತೆ ಅನೇಕರಿದ್ದರು.