ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಹಕಾರ ತತ್ವ ಅಳವಡಿಸಿಕೊಳ್ಳಿ: ಕಲಾಂ ಸಲಹೆ

Rashmi Kasaragodu
Updated On : 31 Mar 2013, 1:24 am

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.30
ಕೃಷಿಕರು ಪರಸ್ಪರ ಸಹಕಾರ ತತ್ವಗಳ ಅಳವಡಿಕೆಯ ಮೂಲಕ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಹೊಂದಲು ಸಾಧ್ಯ. ಆ ಮೂಲಕ ದೇಶದ ಜನಸಂಖ್ಯೆಯ ಬೇಡಿಕೆಗೆ ತಕ್ಕಂತೆ ಆಹಾರ ಉತ್ಪಾದನೆ ಸಾಧಿಸುವುದು ಅವಶ್ಯ ಎಂದು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಸಲಹೆ ನೀಡಿದರು.
ನಗರದಲ್ಲಿ ಶನಿವಾರ ರಾಯಚೂರು ಕೃಷಿ ವಿವಿಯ 3ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ, ನಗರದಲ್ಲಿ ಲಭ್ಯವಿರುವ ಸೌಲಭ್ಯಗಳು ಗ್ರಾಮೀಣ ಪ್ರದೇಶಕ್ಕೂ ತಲುಪುವಂತಾಗಬೇಕು. ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ, ಮಾಹಿತಿಯ ರವಾನೆ, ಕೃಷಿ ವಿಜ್ಞಾನ ವಿಚಾರಗಳ ತಿಳಿಯಪಡಿಸುವ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶದಲ್ಲಿಯೂ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಪರಿಸರ ನಿರ್ಮಿಸುವುದು ಅಗತ್ಯ ಎಂದರು.
ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ: ದೇಶದ 700 ಮಿಲಿಯನ್ ಜನತೆ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಗ್ರಾಮೀಣ ನಿವಾಸಿಗಳಿಗೂ ಸುಸ್ಥಿರ ಅಭಿವೃದ್ಧಿಯ ಮೂಲಕ ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಗುರಿಯಾಗಬೇಕು. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸತ್ಯವನ್ನು ನಾವು ಅರಿಯಬೇಕಿದೆ ಎಂದು ಹೇಳಿದರು. ದೇಶದ ಗ್ರಾಮೀಣ ಪ್ರದೇಶಗಳನ್ನು ಭೌತಿಕ, ತಿಳಿವಳಿಕೆ ನೀಡಿಕೆ, ತಂತ್ರಜ್ಞಾನದ ರವಾನೆ ಮೂಲಕ ನಗರಗಳೊಂದಿಗೆ ಜೋಡಣೆಯ ಕಾರ್ಯ ಮಾಡುವುದು ತೀರಾ ಅವಶ್ಯ. ಅದರಿಂದ ಗ್ರಾಮೀಣರ ಪ್ರಗತಿ ಬಹುಮಟ್ಟಿಗೆ ಸಾಧ್ಯವಾಗಲಿದೆ. ಅದರಿಂದ ದೇಶದ ಆರ್ಥಿಕ ಪ್ರಗತಿಗೆ ಪೂರಕ ಪರಿಸರ ನಿರ್ಮಾಣವಾಗಲಿದೆ ಎಂದು ಹೇಳಿದರು.
ಗುಣಮಟ್ಟದ ಬಿತ್ತನೆ ಬೀಜ ಕಲ್ಪಿಸಿ: ವಿಶ್ವವಿದ್ಯಾಲಯಗಳು ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವುದು, ನೀರಿನ ಮಿತ ಬಳಕೆಯ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ಅನುಕೂಲಕರ ತಳಿಗಳ ಸಂಶೋಧನೆಗೆ ಮತ್ತು ರೈತರಿಗೆ ಗುಣಮಟ್ಟದ ಬೀಜಗಳ ನೀಡಿಕೆಗೆ ಕೃಷಿ ವಿಜ್ಞಾನಿಗಳು ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ರೈತರಿಗೆ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವ ಕಾರ್ಯ ಆಗಬೇಕಿದ್ದು, ಕೃಷಿ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಮಳೆಯ ಪ್ರಮಾಣದ ಜತೆಗೆ ಆಯಾ ಹಂಗಾಮಿನ ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆಯುವ ಪದ್ಧತಿ ಸೇರಿದಂತೆ ವಿವಿಧ ಕೃಷಿ ಸಂಬಂಧಿ ಮಾಹಿತಿಯನ್ನು ರೈತರಿಗೆ ವಿವಿಗಳು ನಿರಂತರವಾಗಿ ರವಾನಿಸಿ ಕೃಷಿ ಕ್ಷೇತ್ರದ ಪ್ರಗತಿಗೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಮತ್ತೊಂದು ಹಸಿರು ಕ್ರಾಂತಿ ಅವಶ್ಯ: ದೇಶವು ಸದ್ಯ ಮತ್ತೊಂದು ಹಸಿರು ಕ್ರಾಂತಿಗೆ ಮುಂದಾಗುವ ಅವಶ್ಯಕತೆಯಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರ ಒದಗಿಸುವ ಹೊಣೆ ಹೊತ್ತಿರುವ ಕೃಷಿ ಕ್ಷೇತ್ರವನ್ನು ಸಬಲಗೊಳಿಸುವುದು ಹಿಂದೆಂದಿಗಿಂತ ಇಂದು ಹೆಚ್ಚು ಅವಶ್ಯ. ಇದಕ್ಕಾಗಿ ಲಭ್ಯವಿರುವ ಜಮೀನಿನಲ್ಲಿಯೇ ದೇಶಕ್ಕೆ ಅಗತ್ಯವಿರುವ ಆಹಾರಧಾನ್ಯ ಉತ್ಪಾದನೆಗೆ ಪೂರಕ ಸಂಶೋಧನೆಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಜನಸಂಖ್ಯೆಗೆ ಅನುಗುಣವಾಗಿ 2020ನೇ ಇಸ್ವಿ ವೇಳೆಗೆ ದೇಶದಲ್ಲಿ 340 ಮಿಲಿಯನ್ ಟನ್ ನಷ್ಟು ಆಹಾರ ಉತ್ಪಾದನೆಯಾಗಬೇಕಿದೆ. ನಗರೀಕರಣದ ಹೆಚ್ಚಳ, ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಕೃಷಿ ಕ್ಷೇತ್ರಕ್ಕೆ ಫಲವತ್ತಾದ ಜಮೀನಿನ ಕೊರತೆಯಿದೆ. ಸದ್ಯ ಕೃಷಿಗೆ 170 ಮಿಲಿಯನ್ ಹೆಕ್ಟೇರ್ ಜಮೀನು ಲಭ್ಯವಿದ್ದರೂ ಅದರಲ್ಲಿ ಎಲ್ಲವೂ ಕೃಷಿಗೆ ನೆರವಾಗುವ ಜಮೀನಿಲ್ಲ. ಹೀಗಾಗಿ ಲಭ್ಯವಿರುವ ಜಮೀನಿನಲ್ಲಿಯೇ ಅಗತ್ಯ ಆಹಾರ ಉತ್ಪಾದನೆ ಮಾಡುವುದು ಬಹುದೊಡ್ಡ ಸವಾಲೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.
ಅಭಾವದ ಮಧ್ಯೆ ಸವಾಲು: ನೀರಿನ ಅಭಾವ, ಮಣ್ಣಿನ ಫಲವತ್ತತೆಯ ಕುಸಿತ, ಗುಣಮಟ್ಟದ ಬೀಜದ ಕೊರತೆಯ ಮಧ್ಯೆಯೂ 2020ರ ವೇಳೆಗೆ ಕೃಷಿ ವಿಜ್ಞಾನಿಗಳು ಹಾಗೂ ತಂತ್ರಜ್ಞರು ವಿವಿಧ ಸಂಸ್ಥೆಗಳ ಜತೆಗೂಡಿ ಉತ್ಪಾದನೆಯ ವಿಸ್ತರಣೆ ನಿಟ್ಟಿನಲ್ಲಿ ಪೂರಕವಾಗಿ ಶ್ರಮಿಸುವುದು ತೀರಾ ಅಗತ್ಯ ಎಂದರು. ಕೃಷಿಕರಿಗೆ ಕೃಷಿ ಸಂಶೋಧನೆಗಳು ಹಾಗೂ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಆಹಾರೋತ್ಪಾದನೆಯಲ್ಲಿ ಹೆಚ್ಚಳಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಡಾ. ಅಬ್ದುಲ್ ಕಲಾಂ ಸಲಹೆ ನೀಡಿದರು.
ಸಮಾರಂಭದಲ್ಲಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್, ಡಾ. ಎಲ್.ಬಿ. ಹೂಗಾರ್, ಡಾ. ಎಸ್.ಜಿ. ಪಾಟೀಲ್, ರಿಜಿಸ್ಟ್ರಾರ್ ಡಾ. ಡಿ.ಪಿ. ಬಿರಾದಾರ್, ಡಾ. ಎಂ.ಕೆ. ನಾಯಕ ಸೇರಿದಂತೆ ಸೆನೆಟ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಪಾಲಕರು ಹಾಗೂ ಕೃಷಿ ವಿವಿ ಬೋಧಕ ವರ್ಗ ಇದ್ದರು.



ಪ್ರತಿಭಾನ್ವಿತರಿಗೆ ಚಿನ್ನದ ಪದಕ
ಬಿಎಸ್ಸಿ ಮತ್ತು ಬಿ.ಟೆಕ್ ಹಾಗೂ ವಿವಿಧ ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂತೋಷ ತಿವಾರಿ, ಮಲ್ಲಾರೆಡ್ಡಿ, ರೇಖಾ ಬಡಲಿಂಗಪ್ಪನವರ್, ದುಶ್ಶಂತ್ ಕುಮಾರ್, ಪ್ರಿಯಾಂಕ, ಪ್ರಕಾಶ್, ಅಪರ್ಣಾ ರಾಧಾಕೃಷ್ಣನ್, ಅನು ತಲೋಹ, ಚೇತನ್, ನೂರುಲ್ಲಾ ಹಾವೇರಿ, ಉಮೇಶ್, ಬೀರ್ಜೆ ರಮೇಶ್ ಮನೋಹರ್, ಮೊಹ್ಮದ್ ವಸೀಂ ಅವರಿಗೆ ಚಿನ್ನದ ಪದಕಗಳನ್ನು ಮಾಜಿ ರಾಷ್ಟ್ರಪತಿ ಕಲಾಂ ವಿತರಿಸಿದರು.
ರೈತ ವಿಜ್ಞಾನಿ ಪ್ರಶಸ್ತಿ ಪ್ರದಾನ
ಅದೇ ರೀತಿ ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಗತಿ ಪರ ರೈತ ದೇವೇಂದ್ರಪ್ಪ ಬಳೂಟಗಿ ಹಾಗೂ ಗುಲ್ಬರ್ಗ ಜಿಲ್ಲೆಯ ಪ್ರಗತಿ ಪರ ರೈತ ಶರಣಬಸಪ್ಪ ಪೀರಪ್ಪ ಪಾಟೀಲ್ ಅವರಿಗೆ ರೈತ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement