ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಮ್ರಾಜ್ಯಕ್ಕೆ ದೊರೆ ಯಾರು?

Lingaraj Badiger
Updated On : 1 Apr 2013, 11:22 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮಾ.31
ಜಿಲ್ಲೆಯ ರಾಜಕೀಯ ಕೇಂದ್ರ ಬಿಂದುವೆಂದು ಹೆಸರಾದ ಲಿಂಗಸ್ಗೂರು ಕ್ಷೇತ್ರ ಸುಮಾರು 1.88 ಲಕ್ಷ ಮತದಾರರನ್ನು ಹೊಂದಿದ್ದು, ವಿವಿಧ ರಾಜಕೀಯ ಪಕ್ಷಗಳ ಬೇರೆ ಬೇರೆ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕ, ಸಚಿವ, ಸಂಸದರನ್ನು ನೀಡಿದ ಹೆಮ್ಮೆಯ ಕ್ಷೇತ್ರವೆನಿಸಿದೆ.
ಇಲ್ಲಿ 1952ರಿಂದ 2004ರವರೆಗೆ ಲಿಂಗಾಯತರು ಮತ್ತು ನಾಯಕರು ಪ್ರಾಬಲ್ಯ ಮೆರೆಯುವ ಮೂಲಕ ಶಾಸಕ, ಸಚಿವರಾಗಿ ಆಯ್ಕೆಯಾಗಿದ್ದಾರೆ. ಕಳೆದ 2008ರ ವಿಧಾಸಭೆ ಚುನಾವಣೆಯಿಂದ ಮೀಸಲು ಕ್ಷೇತ್ರವೆಂದು ಘೋಷಣೆಯಾದ ಪರಿಣಾಮ ಮಾನಪ್ಪ ವಜ್ಜಲ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಗೊಂಡು ಪ್ರಾಬಲ್ಯದ ರಾಜಕೀಯಕ್ಕೆ ಬ್ರೇಕ್ ಹಾಕಿದರು.
ಲಿಂಗಸ್ಗೂರು ಕ್ಷೇತ್ರದಲ್ಲಿ ಲಿಂಗಾಯತ, ನಾಯಕ ಸೇರಿದಂತೆ ಪರಿಶಿಷ್ಟ ಜಾತಿಯ ಜನಾಂಗ ಹೆಚ್ಚಾಗಿದ್ದು, ಇನ್ನು ರಾಜಕೀಯ ಕ್ಷೇತ್ರದಲ್ಲಿ ಕಳೆದ 1952ರಿಂದ ಲಿಂಗಾಯತ ಸಮಾಜದವರು ಹೆಚ್ಚು ಪ್ರಾಬಲ್ಯ ಮೆರೆದಿದ್ದರು. ನಂತರ ಗುರುಗುಂಟಾ ಮತ್ತು ಗುಂತಗೋಳ ಸಂಸ್ಥಾನದ ರಾಜ ಮನೆತನದವರು ರಾಜಕೀಯ ಪ್ರವೇಶಿಸಿ ಶಾಸಕ, ಸಚಿವರಾಗಿ ಆಯ್ಕೆಗೊಂಡರು.
ಕ್ಷೇತ್ರದ ರಾಜಕೀಯ ಹಿನ್ನೋಟ: 1952ರಲ್ಲಿ ನಡೆದ ಮೊಟ್ಟಮೊದಲ ವಿಧಾನಸಭೆ ಚುನಾವಣೆಯಲ್ಲಿ ಕರಡಕಲ್ ಬಸವನಗೌಡ ಪಾಟೀಲ್(1952-1957) ಆಯ್ಕೆಯಾಗಿದ್ದುರು. 1957ರಲ್ಲಿ ನಡೆದ ಚುನಾವಣೆಲ್ಲೂ ಇವರೇ(1957-1962) ಮರು ಆಯ್ಕೆಯಾಗಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಈಡಿಗ ಸಮಾಜದ ಹಿಂದುಳಿದ ವರ್ಗದ ನಿಂಗಣ್ಣ ಗುತ್ತೇದಾರ ಸ್ವತಂತ್ರವಾಗಿ ಸ್ಪರ್ಧಿಸಿ(1962-1967) ಆಯ್ಕೆಯಾಗಿದ್ದರು. ನಂತರ 1967ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಸಂಗನಗೌಡ ವಕೀಲರು(1967-1972) ಆಯ್ಕೆಯಾದರು.
1972ರಲ್ಲಿ ನಡೆದ ಚುನಾವಣೆಯಲ್ಲಿ ಸಿ.ಎನ್. ಪಾಟೀಲರು ಕಾಂಗ್ರೆಸ್‌ನಿಂದ(1972-1977) ಆಯ್ಕೆಯಾಗಿದ್ದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಬಸವರಾಜ ಪಾಟೀಲ ಆನ್ವರಿ ಕಾಂಗ್ರೆಸ್‌ನಿಂದ(1978-1982) ಆಯ್ಕೆಯಾದರು. ತದನಂತರ 1983ರಲ್ಲಿ ಗುರುಗುಂಟಾ ಸಂಸ್ಥಾನದ ರಾಜ ಅಮರಪ್ಪ ನಾಯಕರು (1983-1988) ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷದಿಂದ ಆಯ್ಕೆಯಾದರು. 1988ರ ಚುನಾವಣೆಯಲ್ಲಿ ಗುಂತಗೊಳ ಸಂಸ್ಥಾನದ ರಾಜಾ ಅಮರೇಶ್ವರ ನಾಯಕರು(1988-1993) ಕಾಂಗ್ರೆನಿಂದ ಆಯ್ಕೆಯಾದರು.
ನಂತರ ನಡೆದ ಸತತ ಮೂರು ವಿಧಾನಸಭೆ ಚುನಾವಣೆಯಲ್ಲಿ ಅಮರೇಗೌಡ ಬಯ್ಯಾಪುರ ಕ್ರಮವಾಗಿ ಜನತಾ ಪಕ್ಷ, ಸಂಯುಕ್ತ ಜನತಾ ದಳ ಹಾಗೂ ಜನತಾ ದಳದಿಂದ ಹ್ಯಾಟ್ರಿಕ್ ಗೆಲವು ಸಾಧಿಸಿದರು. 2008ರಲ್ಲಿ ಲಿಂಗಸ್ಗೂರು ಮೀಸಲು ಕ್ಷೇತ್ರವಾದ ಪರಿಣಾಮ ಮಾನಪ್ಪ ವಜ್ಜಲ್ ಬಿಜೆಪಿಯಿಂದ(2008-) ಆಯ್ಕೆಯಾದರು.
ನಾಲ್ವರು ಶಾಸಕರಿಗೆ ಮಂತ್ರಿ ಪಟ್ಟ..: ಜಿಲ್ಲೆಯಲ್ಲಿ ಲಿಂಗಸ್ಗೂರು ಕ್ಷೇತ್ರ ರಾಜಕೀಯ ರಂಗದಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದು, 1972ರಲ್ಲಿ ಸಿ.ಎನ್.ಪಾಟೀಲರು ಅರಣ್ಯ ಸಚಿವರಾಗಿ, 1978ರಲ್ಲಿ ಬಸವರಾಜ ಪಾಟೀಲ ಆನ್ವರಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ, 1988ರಲ್ಲಿ ರಾಜಾ ಅಮರೇಶ್ವರ ನಾಯಕರು ಒಂದು ಬಾರಿ ಧಾರ್ಮಿಕ ದತ್ತಿ ಸಚಿವರಾಗಿ, ಮತ್ತೊಂದು ಬಾರಿ ಕಾನೂನು ಮತ್ತು ಬಂಧಿಖಾನೆ ಸಚಿವರಾಗಿ, 2004ರಲ್ಲಿ ಗೆಲವು ಸಾಧಿಸಿದ್ದ ಅಮರೇಗೌಡ ಬಯ್ಯಾಪುರರು ಸಕ್ಕರೆ ಸಚಿವರಾಗಿ ಪ್ರಾಬಲ್ಯ ಮೆರೆಯುವ ಮೂಲಕ ನಾಲ್ವರು ಶಾಸಕರು ಮಂತ್ರಿಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ.
ಮುಂದಿನ ದೊರೆ ಯಾರು?: ಪ್ರಸ್ತುತ 2013ರ ಈ ಬಾರಿಯ ವಿಧಾನಸಭೆ ಚುನಾವಣಾ ಮಹಾಸಮರ ಜಿಲ್ಲೆಯಲ್ಲಿ ಎಲ್ಲರ ಚಿತ್ತ ಲಿಂಗಸ್ಗೂರು ಕ್ಷೇತ್ರದತ್ತ ಎನ್ನುವಂತಾಗಿದ್ದು, ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಘಟಾನುಘಟಿ ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದು, ಯಾವ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಏ.17ಕ್ಕೆ ಖಚಿತವಾಗಲಿದೆ. ಮೇ 5ರಂದು ನಡೆಯುವ ಚುನಾವಣೆಯಲ್ಲಿ ಲಿಂಗಸ್ಗೂರು ಮೀಸಲು ಕ್ಷೇತ್ರದ ಸಾಮ್ರಾಜ್ಯಕ್ಕೆ ಯಾರನ್ನು ತಮ್ಮ ದೊರೆ ಎಂದು ಆರಿಸುತ್ತಾರೋ ಕಾಯಬೇಕು.
-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement