ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಡದಂಡೆ ಸಮಸ್ಯೆಗೆ ಪರಿಹಾರ: ಕಾಂಗ್ರೆಸ್ ಭರವಸೆ

Lingaraj Badiger
Updated On : 2 May 2013, 11:26 am

ಕ.ಪ್ರ. ವಾರ್ತೆ, ರಾಯಚೂರು, ಮೇ 1
ತುಂಗಭದ್ರಾ ಎಡದಂಡೆ ಕಾಲುವೆ 104ನೇ ಮೈಲ್ ಕೆಳಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಈ ವಿಚಾರವನ್ನೇ ಪ್ರಮುಖ ವಿಷಯವಾಗಿಸಿದ್ದು, ಕಾಂಗ್ರೆಸ್ ರೈತರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ ಎಂದು ತುಂಗಭದ್ರಾ ಎಡದಂಡೆ 104ನೇ ಮೈಲ್ ಕೆಳಭಾಗದ ಹೋರಾಟ ಸಮಿತಿ ಮುಖಂಡ ಬಸಪ್ಪ ತಿಪ್ಪಾರೆಡ್ಡಿ ಹೇಳಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತುಂಗಭದ್ರಾ ಎಡದಂಡೆ ಕಾಲುವೆಯ ಕಟ್ಟ ಕಡೆಯ ಭಾಗದಲ್ಲಿ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ತುರ್ತು ಸಂದರ್ಭದಲ್ಲಿ ಬೆಳೆಗಳ ರಕ್ಷಣೆಗೆ ನೀರಿಲ್ಲವಾಗಿ ಅನೇಕ ಸಂದರ್ಭದಲ್ಲಿ ರೈತರು ಬೆಳೆ ಹಾನಿ ಅನುಭವಿಸಿದೆ ಎಂದು ಆರೋಪಿಸಿದರು.
ನಿರಂತರ ಹೋರಾಟ: ಈ ಕುರಿತು ಕಳೆದ ಅನೇಕ ವರ್ಷಗಳಿಂದ ಕಾಲುವೆ ಕಡೆಯ ಭಾಗದ ರೈತರು ನಿರಂತರ ಹೋರಾಟ ನಡೆಸಿದ್ದು, ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವುಗೊಳಿಸುವುದು, ಗಣೇಕಲ್ ಜಲಾಶಯದ ಮೂಲಕ ಕೆಳಭಾಗದ ರೈತರಿಗೆ 350ರಿಂದ 400 ಕ್ಯುಸೆಕ್ ನೀರೊದಗಿಸುವ ನಿಟ್ಟಿನಲ್ಲಿ ಇರುವ ಬೇಡಿಕೆಗಳಿಗೆ ಮನ್ನಣೆ ದೊರೆತಿಲ್ಲ ಎಂದು ಟೀಕಿಸಿದರು.
ಇದುವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಲ್ಲ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ರೈತರ ಹೋರಾಟಗಳಿಗೆ ಬೆಂಬಲಕ್ಕೆ ನಿಲ್ಲದೇ ಅಸಡ್ಡೆ ತೋರಿದ್ದಾರೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳೇ ಪ್ರಾಮುಖ್ಯತೆ ಪಡೆದಿದೆ. ಈಗಾಗಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.
ಬೆಂಬಲಿಸಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ  ಕಾಲುವೆ ಕೆಳಭಾಗದ ರೈತರ ಎಲ್ಲ ಬೇಡಿಕೆಗಳಿಗೆ ಕೊನೆ ಹಾಡುವುದಾಗಿ ತಮಗೆ ಬೋಸರಾಜು ಭರವಸೆ ಕೊಟ್ಟಿದ್ದಾರೆಂದು ಹೇಳಿದರು. ಮೇಲಿಂದ ಮೇಲೆ ನೀರಿಗಾಗಿ ಹೋರಾಟ ನಡೆಸಿದ ಎಲ್ಲರೂ ಸದ್ಯದ ಚುನಾವಣೆಯಲ್ಲಿ ನಿರ್ಣಾಯಕರಾಗಿ ಮತದಾನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ರೈತ ಪರ ನಿಲುವು ಇರುವವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ನಾಗೇಂದ್ರಪ್ಪ ಮಟಮಾರಿ, ಲಕ್ಷ್ಮಣ ನಾಯಕ, ನಾಗೇಶ ನಾಯಕ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement