ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶೈಕ್ಷಣಿಕ, ವಾಣಿಜ್ಯ ಅಭಿವೃದ್ಧಿ ನಿರ್ಲಕ್ಷ್ಯ: ಪೂಜಾಗಾಂಧಿ

Lingaraj Badiger
Updated On : 2 May 2013, 11:27 am

ಕ.ಪ್ರ. ವಾರ್ತೆ, ರಾಯಚೂರು, ಮೇ 1
ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗುವ ಎಲ್ಲ ಅರ್ಹತೆಯಿದ್ದರೂ ರಾಯಚೂರು ನಗರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಇದುವರೆಗೆ ಅಧಿಕಾರ ನಡೆಸಿದ ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ. ಅದರಿಂದಾಗಿ ಐವತ್ತು ವರ್ಷಗಳು ಕಳೆದರೂ ನಗರದಲ್ಲಿ ಜನತೆ ಈಗಲೂ ಮೂಲಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾಗಾಂಧಿ ಆರೋಪಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಸಂಬಂಧಿಸಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ನಗರ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ಅದೇ ರೀತಿ ವಾಣಿಜ್ಯ ನಗರಿಯಾಗಿ ಬೆಳೆಯುವ ಅವಕಾಶ ಸಾಕಷ್ಟಿದೆ. ಆದರೆ ಅಧಿಕಾರ ನಡೆಸಿದವರ ನಿರ್ಲಕ್ಷ್ಯಕ್ಕೆ ನಗರ ಕ್ಷೇತ್ರ ಸಾಕ್ಷಿಯಾಗಿದ್ದು, ಸಮಸ್ಯೆಗಳ ಆಗರವಾಗಿದೆ ಎಂದು ಟೀಕಿಸಿದರು.
ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದಾಗಿ ನಗರದ ಅಭಿವೃದ್ಧಿ ಕುಂಠಿತ ಗೊಂಡಿದೆ. ಚುನಾವಣೆ ವೇಳೆ ನೀಡುವ ಭರವಸೆಗಳು ಆನಂತರದಲ್ಲಿ ಈಡೇರಿದ್ದು ತೀರಾ ಕಡಿಮೆ ಎಂದು ಆರೋಪಿಸಿ, ಮೂಲಸೌಲಭ್ಯಗಳ ಕೊರತೆ ನೀಗಿಸಲು ನಾಯಕರಿಗೆ ಸಾಧ್ಯವಾಗಿಲ್ಲ ಎಂದು ದೂರಿದರು.
ನಗರವನ್ನು ಸ್ವಚ್ಛ, ಸುಂದರವಾಗಿಸುವ ಪ್ರಯತ್ನಗಳು ನಡೆದಿಲ್ಲ. ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಹಾಗೂ ಸರ್ಕಾರದ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆಂದು ಟೀಕಿಸಿದರು.
ನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಮಹಿಳೆಯರು ಶೌಚಾಲಯಕ್ಕೆ ತೆರಳಲು ರಾತ್ರಿವರೆಗೆ ಕಾಯುವಂಥ ಸ್ಥಿತಿ ಸೃಷ್ಟಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಕೊರತೆಯಿದ್ದು, ಜನತೆ ಪರದಾಡುವಂಥ ಸ್ಥಿತಿ ನಿರ್ಮಾಣ. ಶಾಸಕರು ಕೇವಲ ನಗರದತ್ತಲೇ ಹೆಚ್ಚಿನ ಗಮನಹರಿಸಿದ್ದು, ಗ್ರಾಮೀಣ ಭಾಗವನ್ನು ಕಡೆಗಣಿಸಿದ್ದಾರೆಂದು ದೂರಿದರು.
ನೀರು ವಿದ್ಯುತ್ ಕೊರತೆ: ಬೇಸಿಗೆಯಲ್ಲಿ ನಗರ ಕ್ಷೇತ್ರದ ವ್ಯಾಪ್ತಿಯ ರಾಯಚೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಜನತೆಗೆ ಶುದ್ಧ ಕುಡಿಯುವ ನೀರೊದಗಿಸುವಲ್ಲಿ ಅಸಡ್ಡೆ ತೋರಲಾಗಿದೆ. ಶಕ್ತಿನಗರದಲ್ಲಿ ಆರ್ ಟಿಪಿಎಸ್ ವಿದ್ಯುತ್ ಕೇಂದ್ರವಿದ್ದರೂ 24 ಗಂಟೆ ವಿದ್ಯುತ್ ನೀಡುವುದು ಸಾಧ್ಯವಾಗಿಲ್ಲ. ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಕಡಿತ ತೀರಾ ಸಾಮಾನ್ಯ ಸಂಗತಿ ಎಂಬಂತಾಗಿದೆ ಎಂದು ದೂರಿದರು.
ಪ್ರಮುಖ ಪಕ್ಷಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿರಾಸಕ್ತಿ ತೋರಿವೆ. ಸದ್ಯದ ಚುನಾವಣೆಯಲ್ಲಿ ಬಿಎಸ್ಸಾರ್‌ಗೆ ಬೆಂಬಲಿಸಿದಲ್ಲಿ ನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾವು ಬದ್ಧ ಎಂದು ಪೂಜಾಗಾಂಧಿ ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಖಲೀಲ್ ಅಹ್ಮದ್, ಚೇತನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement