ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಂದಮ್ಮಗಳ ಜತೆ ತಾಯಂದಿರು ಮತಗಟ್ಟೆಗೆ; ಆಡಳಿತಕ್ಕೆ ಹಿಡಿಶಾಪ

Vishwanath S
Updated On : 5 May 2013, 12:42 pm

ರಾಯಚೂರು: ಚುನಾವಣೆ ವಿಭಾಗದ ಲೋಪದಿಂದ ಕಂದಮ್ಮಗಳಿಗೆ ಶಿಕ್ಷೆಯಾಯಿತು. ಉರಿ ಬಿಸಿಲಿನಲ್ಲಿಯೇ ಮತದಾನ ಕಾರ್ಯಕ್ಕೆ ತಮ್ಮ ತಾಯಂದಿರೊಂದಿಗೆ ಮತಯಂತ್ರಗಳನ್ನಿರಿಸಿದ್ದ ಕೇಂದ್ರಗಳಿಗೆ ಆಗಮಿಸಿ ಮತಗಟ್ಟೆಗಳಿಗೆ ತೆರಳಿದ ಪ್ರಸಂಗ ಶನಿವಾರ ಕಂಡುಬಂದಿತು.
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆಯ ಮತದಾನ ಕಾರ್ಯಕ್ಕೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಅವರಲ್ಲಿ ಕೆಲವರು ಕಂದಮ್ಮಗಳ ತಾಯಂದಿರು ಎಂಬ ವಿಚಾರವನ್ನೂ ಮರೆತು ಮತದಾನ ಕಾರ್ಯಕ್ಕೆ ನಿಯೋಜಿಸಿರುವುದು ಸ್ಪಷ್ಟ. ಪರಿಣಾಮ ಶನಿವಾರ ನಗರದ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಮತಯಂತ್ರಗಳನ್ನಿರಿಸಿದ ಕೇಂದ್ರಕ್ಕೆ ಹೊರ ತಾಲೂಕುಗಳಿಂದ ಅನೇಕ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಕರ್ತವ್ಯಕ್ಕೆ ಹಾಜರಾಗುವಂತಾಯಿತು.
ಅಧಿಕಾರಿಗಳ ನಡೆಗೆ ಬೇಸರ: ಈ ಕುರಿತು 'ಕನ್ನಡಪ್ರಭ'ಕ್ಕೆ ಹೆಸರು ಹೇಳಲಿಚ್ಛಿಸದ ಮಹಿಳಾ ಸಿಬ್ಬಂದಿಯೊಬ್ಬರು ಮಾತನಾಡಿ, ಚುನಾವಣೆ ಕರ್ತವ್ಯ ಮಾಡದಿದ್ದರೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿರುವುದರಿಂದಲೇ ಚುನಾವಣೆ ಕಾರ್ಯಕ್ಕೆ ಮಕ್ಕಳೊಂದಿಗೆ ಬಂದಿದ್ದಾಗಿ ಬೇಸರ ವ್ಯಕ್ತಪಡಿಸಿದರು. ಒಂದೆಡೆ ಉರಿ ಬಿಸಿಲು ಮತ್ತೊಂದೆಡೆ ಮತಗಟ್ಟೆಗಳಿಗೆ ತೆರಳುವ ತರಾತುರಿ. ಅದರ ನಡುವೆ ಮಕ್ಕಳ ಆರೈಕೆಯಲ್ಲಿ ಮಹಿಳಾ ಸಿಬ್ಬಂದಿ ತೊಡಗಿದ್ದು ಕಂಡುಬಂದಿತು. ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅನೇಕರು ಸುಳ್ಳು ನೆಪವೊಡ್ಡಿ, ವಾಮಮಾರ್ಗಗಳ ಮೂಲಕ ನಿಯೋಜನೆ ಆದೇಶ ರದ್ದುಗೊಳಿಸಿಕೊಂಡು, ಕರ್ತವ್ಯದಿಂದ ತಪ್ಪಿಸಿಕೊಂಡಿದ್ದು ಸ್ಪಷ್ಟ.
ಅನೇಕರಿಗೆ ಅನಾರೋಗ್ಯದ ಕಾರಣಕ್ಕೆ ಕರ್ತವ್ಯದಿಂದ ರಿಯಾಯಿತಿ ನೀಡಿರುವುದು ಸರಿ. ಆದರೆ ಕರ್ತವ್ಯದಿಂದ ನಿಜವಾಗಿಯೂ ರಿಯಾಯಿತಿ ಪಡೆಯಬೇಕಿದ್ದ ಕಂದಮ್ಮಗಳ ತಾಯಂದಿರಿಗೆ ಮಾತ್ರ ಚುನಾವಣೆ ಕರ್ತವ್ಯದಿಂದ ಮುಕ್ತಿ ದೊರೆಯದಿರುವುದು ಆಡಳಿತದ ಕಾರ್ಯವೈಖರಿಗೆ ಉದಾಹರಣೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement