ತಪ್ಪದೇ ಮತ ಹಾಕಿ: ಸಿಇಒ
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 4
ರಾಜ್ಯದ ಮತದಾರರ ಪಾಲಿಗೆ ಮೇ 5 ಮಹತ್ವದ ಭಾನುವಾರ. ಇದು ಪ್ರತಿ ಭಾನುವಾರದಂತಲ್ಲ. ಅಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಗತಿಗೆ ಸಹಕರಿಸಿ.
- ಹೀಗೆಂದು ಜಿಪಂ ಸಿಇಒ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮ ಸಮಿತಿ ಮುಖ್ಯಸ್ಥ ಟಿ. ಜ್ಞಾನಪ್ರಕಾಶ್ ಮನವಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಭಾನುವಾರ ಎಲ್ಲರೂ ಸಂಬಂಧಿಕರ ಮನೆಗೆ ಹೋಗುವುದು, ಸಿನಿಮಾ ವೀಕ್ಷಣೆಗೆ ತೆರಳುವುದು ಸಾಮಾನ್ಯ. ಆದರೆ ಈ ಭಾನುವಾರ ಮೇ 5ರಂದು ಇಂಥ ಕಾರ್ಯ ಮಾಡದೇ ಪ್ರಜಾಪ್ರಭುತ್ವ ರಕ್ಷಣೆಯ ನಿಟ್ಟಿನಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದನ್ನು ಮರೆಯದಿರಲು ಮನವಿ ಮಾಡಿದರು.
ಸಮರ್ಥರ ಆಯ್ಕೆಗೆ ಸಹಕರಿಸಿ: ಜಿಲ್ಲೆಯಲ್ಲಿ ಕಳೆದ ಅನೇಕ ಚುನಾವಣೆಗಳಲ್ಲಿ ಪೂರ್ಣ ಪ್ರಮಾಣದ ಮತದಾನ ಒಮ್ಮೆಯೂ ಸಾಧ್ಯವಾಗಿಲ್ಲ. ಹೈ.ಕ. ಭಾಗದ ಸರಾಸರಿ ಮತದಾನದ ಪ್ರಮಾಣವೇ ಶೇ.54ರಷ್ಟಿದೆ. ಹೀಗಾಗಿ ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಥ ನಾಯಕರ ಆಯ್ಕೆಗೆ ಪೂರ್ಣ ಪ್ರಮಾಣದ ಮತದಾನ ಅವಶ್ಯ ಎಂದು ಹೇಳಿದರು.
ಮತದಾನದ ಪ್ರಮಾಣ ಕುಸಿತ ತಡೆದು ಜಾಗೃತಿ ಮೂಡಿಸುವ ಕಾರ್ಯವನ್ನು ಗುಜರಾತ್ ನಂತರ ಕರ್ನಾಟಕ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಚುನಾವಣೆ ಆಯೋಗವು ಆ ಮೂಲಕ ಜಾಗೃತಿ ಕಾರ್ಯಕ್ರಮಗಳ ಜಾರಿಗೆ ವಿಶೇಷ ಸಮಿತಿ ರಚಿಸಿತೆಂದು ಹೇಳಿದರು.
ಮತದಾನ ಜಾಗೃತಿಗಾಗಿ ಶತಪ್ರಯತ್ನ: ಅದರಂತೆ ಜಿಲ್ಲೆಯಲ್ಲಿ ಬೀದಿ ನಾಟಕ, ರಂಗೋಲಿ ಸ್ಪರ್ಧೆ, ರ್ಯಾಲಿಗಳು ಸೇರಿದಂತೆ ನಾನಾ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ನಗರ ಸೇರಿದಂತೆ ಜಿಲ್ಲಾದ್ಯಂತ ಚುನಾವಣೆ ಹಿನ್ನೆಲೆ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಭೀಕರ ಬರವಿದ್ದು, ಅನೇಕರು ಮಹಾನಗರಗಳಿಗೆ ಗುಳೆ ಹೋಗಿರುವುದರಿಂದ ಪೂರ್ಣ ಪ್ರಮಾಣದ ಮತದಾನ ಸಾಧ್ಯವಾಗಲಿಕ್ಕಿಲ್ಲ. ಆದರೆ ಸದ್ಯ ಲಭ್ಯರಿರುವ ಮತದಾರರೆಲ್ಲರೂ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬುದು ಆಶಯವಾಗಿದೆ. ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚುನಾವಣೆ ಆಯೋಗವು ಮೇ 5ರ ಸಂಜೆಯವರೆಗೆ ಅವಕಾಶ ನೀಡಿದೆ. ಹೀಗಾಗಿ ಮತ್ತಷ್ಟು ಕಾರ್ಯಕ್ರಮ ಜಾರಿಯಲ್ಲಿರಿಸಲಾಗುತ್ತದೆ ಎಂದು ಹೇಳಿದರು.
ಬಹಿಷ್ಕಾರ- ಮನವರಿಕೆ: ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಸರ್ಜಾಪುರ, ಕುಪ್ಪಿಗುಡ್ಡ ಹಾಗೂ ಅಮರಾವತಿ ಗ್ರಾಮಗಳನ್ನು ಮಸ್ಕಿ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಿದ್ದಕ್ಕೆ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದರು. ಈ ಕುರಿತು ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಗಿದೆ. ಲಿಂಗಸ್ಗೂರು ಪಟ್ಟಣವು ಈ ಗ್ರಾಮಗಳಿಗೆ ಹತ್ತಿರದಲ್ಲಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಮಸ್ಕಿ ಕ್ಷೇತ್ರಕ್ಕೆ ಮತ್ತು ಉದ್ದೇಶಿತ ಮಸ್ಕಿ ತಾಲೂಕಿಗೆ ಸೇರ್ಪಡೆಗೆ ವಿರೋಧಿಸಿದ್ದಾರೆಂದು ತಿಳಿಸಿದರು.
ಗ್ರಾಮಸ್ಥರಿಂದ ಈ ವಿಷಯಕ್ಕೆ ಸಂಬಂಧಿಸಿ ಮನವಿ ಸ್ವೀಕರಿಸಿದ್ದು, ಸದ್ಯದ ಚುನಾವಣೆಯ ಸಂದರ್ಭದಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗದು. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.
ಕುಡಿವ ನೀರಿನ ಅಭಾವ: ಜಿಲ್ಲೆಯ 367 ಗ್ರಾಮಗಳಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಕುಡಿವ ನೀರಿನ ಅಭಾವವಿರುವುದು ಕಂಡುಬಂದಿದೆ. ಜಿಪಂ ಬಳಿ ಲಭ್ಯವಿರುವ ಅನುದಾನದಲ್ಲಿಯೇ ಸಮರ್ಪಕ ಕುಡಿವ ನೀರೊದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ದಕ್ಷಿಣ್ ಗ್ರೂಪ್ ಎಂಬ ಸಂಸ್ಥೆಯೊಂದಿಗೆ ಜಿಲ್ಲಾಡಳಿತ ಚುನಾವಣೆ ನಂತರದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಶುದ್ಧ ಕುಡಿವ ನೀರಿನ ಪೂರೈಕೆ ಘಟಕ ಮಾನವಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. 15 ಪೈಸೆಗೆ ಒಂದು ಲೀಟರ್ ಶುದ್ಧ ಕುಡಿವ ನೀರು ಒದಗಿಸುವ ಕಾರ್ಯ ಇದಾಗಿದೆ ಎಂದು ಹೇಳಿದರು.
ತಟಸ್ಥ ಮತದಾನ: ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆಯ ಮತದಾನದಲ್ಲಿ ಎಲ್ಲ ಅರ್ಹ ಮತದಾರರು ಭಾಗವಹಿಸಬೇಕು. ಹಾಗೊಂದು ವೇಳೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತದಾನ ಮಾಡಲು ಆಸಕ್ತಿಯಿಲ್ಲದ್ದಿದ್ದಲ್ಲಿ ಮತದಾನದಿಂದ ದೂರವುಳಿಯದೇ ಮತಗಟ್ಟೆಗಳಿಗೆ ತೆರಳಿ ಅಲ್ಲಿ ಲಭ್ಯವಿರುವ 49-ಒ ಎಂಬ ದಾಖಲೆಯಲ್ಲಿ ಯಾವುದೇ ಅಭ್ಯರ್ಥಿಗೆ ಮತ ಹಾಕದಿರುವ ಬಗ್ಗೆ ನಮೂದಿಸಬೇಕೆಂದು ಮನವಿ ಮಾಡಿದರು.