ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತ ಜಾಗೃತಿಗೆ ಶತ ಪ್ರಯತ್ನ ಜಗನ್ನಾಥ ಆರ್. ದೇಸಾಯಿ

Vishwanath S
Updated On : 5 May 2013, 12:41 pm

ಕನ್ನಡಪ್ರಭ ವಾರ್ತೆ  ,   ರಾಯಚೂರು  ,   ಮೇ 4
ಸದ್ಯ ಚುನಾವಣೆಯದ್ದೇ ಮಾತು. ಹಿಂದೊಮ್ಮೆ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್ ಬಂಟಿಂಗ್‌ಗಳದ್ದೇ ಎಲ್ಲೆಡೆ ದರ್ಬಾರು ಕಾಣಸಿಗುತ್ತಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಚುನಾವಣೆ ಆಯೋಗದ ಕಟ್ಟುನಿಟ್ಟಿನಿಂದಾಗಿ ಬ್ಯಾನರ್‌ಗಳು ಮಾಯವಾಗಿವೆ. ಅದರ ಬದಲಿಗೆ ಜಿಲ್ಲಾಡಳಿತದ ಮತದಾರರ ಜಾಗೃತಿ ಬ್ಯಾನರ್, ವಿವಿಧ ಕಾರ್ಯಕ್ರಮಗಳು ರಾಜಕೀಯ ಪಕ್ಷಗಳ ಪ್ರಚಾರಕ್ಕಿಂತ ಮೇಲುಗೈ ಸಾಧಿಸಿದ್ದು ಗಮನಾರ್ಹ.
ಜಿಲ್ಲೆಯಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗ ಮತದಾರರು ಮತಗಟ್ಟೆಗೆ ಬಾರದೇ ಮತದಾನದ ಪ್ರಮಾಣ ಕುಸಿತ ಕಾಣುವುದು ತೀರಾ ಸಹಜ. ಅದೇ ಕಾರಣಕ್ಕೆ ಚುನಾವಣೆ ಆಯೋಗವು ಪ್ರಸಕ್ತ ಚುನಾವಣೆ ವೇಳೆಗೆ ಗುಜರಾತ್‌ನಲ್ಲಿ ನಡೆಸಿದಂತೆ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿತು. ಅದರಂತೆ ಜಿಲ್ಲಾ ಮಟ್ಟದಲ್ಲಿ ಮತದಾರರ ಜಾಗೃತಿಗೆಂದೇ ಸಮಿತಿ ರಚಿಸಿ ಜಾಗೃತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ.
ತರಬೇತಿ ಮೂಲಕ ಜಾಗೃತಿ: ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 13,25,812 ಆಗಿದೆ. ಪ್ರತಿ ಬಾರಿಯ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆಯಾಗುತ್ತದೆ. ಆದರೆ ಮತದಾನಕ್ಕೆ ಮಾತ್ರ ನಿರಾಸಕ್ತಿ ನಿರಂತರ. ಅದರಲ್ಲೂ ನಗರ ಪ್ರದೇಶದಲ್ಲಿಯೇ ಮತದಾನಕ್ಕೆ ಆಸಕ್ತಿ ತೋರಿದ್ದು ಕಡಿಮೆ. ಗ್ರಾಮೀಣ ಪ್ರದೇಶದವರಲ್ಲಿ ಮತದಾನದ ಜಾಗೃತಿ ಹೆಚ್ಚೆನ್ನಬಹುದು. ಪರಿಣಾಮ ಕಳೆದ 2008ರ ಚುನಾವಣೆಯಲ್ಲಿ ಹೈ-ಕ ಭಾಗದಲ್ಲಿನ ಸರಾಸರಿ ಮತದಾನದ ಪ್ರಮಾಣ ಶೇ.54 ಮಾತ್ರ.
ಈ ಪ್ರಮಾಣ ಹೆಚ್ಚಳ ಮಾಡುವುದು ಹಾಗೂ ಪೂರ್ಣ ಪ್ರಮಾಣದ ಮತದಾನಕ್ಕೆ ಪೂರಕ ಜಾಗೃತಿ ಮೂಡಿಸುವ ಹೊಣೆ ಹೊತ್ತ ಜಿಲ್ಲೆಯ ಮತದಾರರ ಜಾಗೃತಿ ಸಮಿತಿಯು ಬೀದಿ ನಾಟಕ, ರಂಗೋಲಿ ಸ್ಪರ್ಧೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರಿಗೆ ತರಬೇತಿ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಯಿತು.
ಸಾಧನೆಯ ನೋಟ: ಜಿಲ್ಲಾದ್ಯಂತ ಮತದಾರರ ಜಾಗೃತಿ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷಗಳ ಪ್ರಚಾರಕ್ಕಿಂತ ಕಡಿಮೆಯಾಗಿರಲಿಲ್ಲ. ಜಿಲ್ಲಾದ್ಯಂತ 122 ಬೃಹತ್ ಜಾಹೀರಾತು ಫಲಕಗಳಲ್ಲಿ ಖ್ಯಾತನಾಮರಾದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ನಟ ಪುನೀತ್ ರಾಜ್ ಕುಮಾರ್, ನಟಿ ಐಂದ್ರಿತಾ ರೇ ಸೇರಿದಂತೆ ಅನೇಕರು ಕಡ್ಡಾಯ ಮತದಾನದ ಸಂದೇಶ ನೀಡಿದ ಫಲಕಗಳನ್ನು ಪ್ರದರ್ಶಿಸಲಾಗಿದೆ.
ಜಿಲ್ಲೆಯ 164 ಗ್ರಾಪಂ.ಗಳಲ್ಲಿ 628 ಬ್ಯಾನರ್‌ಗಳು, ಜಿಲ್ಲಾ ಮಟ್ಟದ 12 ರ್ಯಾಲಿಗಳು, ತಾಲೂಕು ಮಟ್ಟದಲ್ಲಿ ಮ್ಯಾರಾಥಾನ್, 70 ಪ್ರಭಾತ್ ಫೇರಿಗಳು, ಒಟ್ಟು ಸುಮಾರು 80 ಸಾವಿರ ಮತದಾರರಿಂದ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ. 150 ಕಡೆ ಮತದಾನದ ಮಹತ್ವ ಕುರಿತ ಬೀದಿ ನಾಟಕದ ಪ್ರದರ್ಶಿಸಲಾಗಿದೆ.
ಮತದಾನ ಹೆಚ್ಚಳಕ್ಕೆ ಪೂರಕ ಪರಿಸರ: ಎಲ್ಲ ಗ್ರಾಪಂ.ಗಳಲ್ಲಿ 26 ಸಾವಿರ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಪ್ರಾಚಾರ್ಯರಿಗೂ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯ ಮತದಾನ ಮಾಡುವಂತೆ ನಿರಂತರ ಧ್ವನಿವರ್ಧಕದ ಮೂಲಕ ಸಂದೇಶ ಪ್ರಸಾರ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜಿಪಂ ಸಿಇಒ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದ ಸಮಿತಿ ಮುಖ್ಯಸ್ಥ ಟಿ. ಜ್ಞಾನಪ್ರಕಾಶ್, ಜಿಲ್ಲೆಯ ಮತದಾರರಲ್ಲಿ ಕಡ್ಡಾಯ ಮತದಾನ ಮತ್ತು ಮತದಾನದ ಮಹತ್ವ ಸಾರುವ ಪ್ರಯತ್ನ ಬೃಹತ್ ಪ್ರಮಾಣದಲ್ಲಿ ನಡೆಸಲಾಗಿದೆ. ಮತದಾನದ ಪ್ರಮಾಣ ಹೆಚ್ಚಳಕ್ಕೆ ಪೂರಕ ಪರಿಸರ ನಿರ್ಮಿಸಲಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನ ನಿರೀಕ್ಷಿತ ಎಂದಿದ್ದಾರೆ.
ಒಂದೆಡೆ ಜಿಲ್ಲೆಯನ್ನು ಭೀಕರ ಬರ ಕಾಡುತ್ತಿದೆ. ಪರಿಣಾಮ ಕೃಷಿ ಕೂಲಿಕಾರ್ಮಿಕರು ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಆದರೆ ಲಭ್ಯವಿರುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ನಿರೀಕ್ಷೆ ಸಮಿತಿಯದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement