ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಜ್ಜು
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 4
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆ ಪೂರ್ಣಗೊಂಡಿದ್ದು, ಶನಿವಾರ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯು ಮತಯಂತ್ರಗಳೊಂದಿಗೆ ತಮಗೆ ಸೂಚಿಸಿದ ಮತಗಟ್ಟೆಗಳಿಗೆ ತೆರಳಿದರು.
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಪ್ರಮುಖ ಕೇಂದ್ರಗಳಿಂದ ಮತಯಂತ್ರಗಳನ್ನು ಪಡೆದ ಸಿಬ್ಬಂದಿ ಮತದಾನ ಕಾರ್ಯಕ್ಕೆ ಸಜ್ಜಾಗಿದ್ದು, ಸೂಚಿಸಿದ ಮತಗಟ್ಟೆಗಳಿಗೆ ತೆರಳಿದರು. ಈ ಮಧ್ಯೆ ಜಿಲ್ಲೆಯಲ್ಲಿ ನಡೆಯುವ ಮತದಾನ ಕಾರ್ಯಕ್ಕಾಗಿ ಜಿಲ್ಲಾಡಳಿತ ಎಲ್ಲ ಸಿದ್ಧತೆ ಪೂರ್ಣಗೊಳಿಸಿದೆ.
1,549 ಮತಗಟ್ಟೆ: ಪ್ರಸಕ್ತ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 13,25,812 ಜನ ಮತದಾರರಿದ್ದಾರೆ. ಇದರಲ್ಲಿ 6,65,678 ಪುರುಷ ಹಾಗೂ 6,59,864 ಜನ ಮಹಿಳಾ ಮತದಾರರಿದ್ದಾರೆ. ಮತದಾನ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,549 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 7,435 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 1,549 ಮತಗಟ್ಟೆಗಳ ಪೈಕಿ 332 ಅತೀ ಸೂಕ್ಷ್ಮ ಮತ್ತು 542 ಸೂಕ್ಷ್ಮ ಮತಗಟ್ಟೆಗಳು ಹಾಗೂ 675 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತಗಟ್ಟೆಗಳಿಗೆ ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಭದ್ರತೆ ಹಾಗೂ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲಿದ್ದಾರೆ.
215 ವಿವಿಧ ತಂಡ ರಚನೆ: ಅದೇ ರೀತಿ ಚುನಾವಣೆಯ ಮತದಾನದ ಮೇಲೆ 435 ಮೈಕ್ರೋ ಅಬ್ಸರ್ವರ್ಸ್, 21 ಫೈಯಿಂಗ್ ಸ್ಕ್ವಾಡ್, 35 ಸಂಚಾರಿ ದಳಗಳು, 109 ಸೆಕ್ಟರಲ್ ಅಧಿಕಾರಿಗಳು ಸೇರಿ ಒಟ್ಟು 215 ವಿವಿಧ ತಂಡಗಳನ್ನು ರಚಿಸಲಾಗಿದೆ. ಮತದಾನ ಕಾರ್ಯದ ವಿಡಿಯೋ ಚಿತ್ರೀಕರಣಕ್ಕೆ ನೇಮಕ ಮಾಡಲಾಗಿದೆ. ಪ್ರತಿ ಕ್ಷೇತ್ರವಾರು 5 ಅತೀ ಸೂಕ್ಷ್ಮ ಮತಗಟ್ಟೆಗಳಂತೆ ಒಟ್ಟು 7 ಕ್ಷೇತ್ರಗಳಲ್ಲಿ ಒಟ್ಟು 35 ಕಡೆ ವೆಬ್ ಕಾಸ್ಟಿಂಗ್ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಅಗತ್ಯ ವಾಹನ ಸೌಕರ್ಯ: ಚುನಾವಣಾ ಸಿಬ್ಬಂದಿಯನ್ನು ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಕರೆದೊಯ್ಯಲು ಹಾಗೂ ತಾಲೂಕು ಕೇಂದ್ರಗಳಿಂದ ಆಯಾ ಮತಗಟ್ಟೆಗಳಿಗೆ ಮತದಾನ ಸಿಬ್ಬಂದಿ ತೆರಳಲು 210 ಬಸ್ಗಳು, 39 ಮಿನಿ ಬಸ್, 33 ಕ್ರೂಸರ್, 39 ಮ್ಯಾಕ್ಸಿ ಕ್ಯಾಬ್, 45 ಜೀಪ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸ್ಥಳಗಳಲ್ಲಿ ವೈದ್ಯಾಧಿಕಾರಿಗಳ 7 ತಂಡಗಳನ್ನು ರಚಿಸಿದ್ದು ಅಧಿಕಾರಿಗಳ ಮತ್ತು ಸಿಬ್ಬಂದಿಯ ಆರೋಗ್ಯದ ಗಮನಹರಿಸುವ ಸೌಲಭ್ಯ ಒದಗಿಸಲಾಗಿದೆ.
ಈಗಾಗಲೇ ಸಾರಿಗೆ ಸಂಸ್ಥೆಯು ಮತದಾನದ ದಿನ ಬಸ್ಗಳ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಕ್ಕೆ ಬಸ್ ಸೇವೆಗೆ ಜಿಲ್ಲಾದ್ಯಂತ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದು, ಖಾಸಗಿ ವಾಹನಗಳ ಸಂಚಾರವೂ ತೀರಾ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಬಿಗಿ ಭದ್ರತೆ: ಚುನಾವಣೆಯಲ್ಲಿ ಒಬ್ಬರು ಎಸ್ಪಿ, ಮೂವರು ಡಿವೈಎಸ್ಪಿ ಅಷ್ಟೇ ಅಲ್ಲದೇ ಮೂವರು ಡಿವೈಎಸ್ಪಿಗಳನ್ನು ವಿಶೇಷವಾಗಿ ಕರೆಯಿಸಲಾಗಿದೆ. ಇವರಲ್ಲದೇ 18 ಸಿಪಿಐಗಳು, 33 ಪಿಎಸ್ಸೈ, 84 ಎಎಸ್ಸೈ, 288 ಮುಖ್ಯಪೇದೆಗಳು, 772 ಪೇದೆಗಳು, 725 ಗೃಹರಕ್ಷಕ ದಳದ ಸಿಬ್ಬಂದಿ ಅವರ ಜತೆಗೆ 1,500 ಜನ ಅರೆಸೇನಾ ಪಡೆಯ ಸಿಬ್ಬಂದಿ ಭದ್ರತೆಯ ಹೊಣೆ ಹೊರಲಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಕಾರ್ಯಕ್ಕಾಗಿ ಸುಮಾರು 900ಕ್ಕೂ ಹೆಚ್ಚಿನ ರೌಡಿಶೀಟರ್ಗಳಿಂದ ಸನ್ನಡತೆಯ ಬಾಂಡ್ ಪಡೆಯಲಾಗಿದೆ. ಕೆಲವರನ್ನು ಚುನಾವಣೆಯ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.