ಆಯೋಗದ ನಿರೀಕ್ಷೆ ಹುಸಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 5
ಜಿಲ್ಲೆಯಲ್ಲಿ ಕಳೆದ ಅನೇಕ ಚುನಾವಣೆಗಳಲ್ಲಿ ಮತದಾನದತ್ತ ಮತದಾರ ಪ್ರಭುವಿನ ಆಸಕ್ತಿ ಅಷ್ಟಕ್ಕಷ್ಟೇ. ಕೆಲ ಮತದಾರರು ರಜೆ ದೊರೆಯಿತೆಂದು ಮನೆಯಲ್ಲಿಯೇ ಉಳಿದರೆ ಮತ್ತೆ ಕೆಲವರು ವೋಟ್ ಹಾಕಿದ್ರೇನು, ಹಾಕದಿದ್ರೇನು.. ಏನೂ ಬದಲಾಗಲ್ಲ ಬಿಡಿ.. ಎಂಬ ಉಡಾಫೆ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ ಕೈಗೊಂಡ ಜಾಗೃತಿ ಕಾರ್ಯಕ್ರಮಗಳ ಪರಿಣಾಮ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ನಿರೀಕ್ಷೆಯಂತಲ್ಲ ಎಂಬುದು ಸತ್ಯ.
ಜಿಲ್ಲೆಯಲ್ಲಿ ಕಳೆದ ಕೆಲ ಚುನಾವಣೆಗಳಿಂದ ಮತದಾನದ ಪ್ರಮಾಣ ತೀವ್ರ ಕುಸಿತ ಕಂಡಿತ್ತು. ಇದರಿಂದ ಎಚ್ಚೆತ್ತ ಚುನಾವಣೆ ಆಯೋಗವು ಮತದಾನದ ಪ್ರಮಾಣ ಹೆಚ್ಚಳಕ್ಕೆ ಮತದಾರರ ಜಾಗೃತಿಯಂಥ ಕಾರ್ಯಕ್ರಮಗಳಿಗೆ ಚಾಲನೆ ನೀಡಿತ್ತು.
ಹಲವು ಕಾರ್ಯಕ್ರಮ: ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸಿಕೊಡುವುದು, ಅನಕ್ಷರಸ್ಥರಲ್ಲಿಯೂ ಮತದಾನದಿಂದಾಗುವ ಬದಲಾವಣೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಮತದಾನದ ಮೂಲಕ ಮಾತ್ರ ಉತ್ತಮ ನಾಯಕನ ಆಯ್ಕೆ ಸಾಧ್ಯ ಎಂಬ ಅನೇಕ ಸಂದೇಶ ಸಾರುವ ಕಾರ್ಯ ಮಾಡಲಾಗಿತ್ತು.
ಜಿಲ್ಲೆಯಲ್ಲಿ 80 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರಿಂದ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಪಡೆಯಲಾಗಿತ್ತು. ಮತದಾರರ ಜಾಗೃತಿಗೆ ಬೀದಿ ನಾಟಕ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏ.1ರಿಂದ ಏ. 30ರವರೆಗೆ ಹತ್ತಾರು ರೀತಿಯಲ್ಲಿ ಬ್ಯಾನರ್, ಬೃಹತ್ ಫಲಕಗಳಿಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಖ್ಯಾತ ನಟ ಪುನೀತ್ ರಾಜಕುಮಾರ್ ಮತ್ತಿತರರಿದ್ದ ಫಲಕಗಳನ್ನು ಪ್ರದರ್ಶಿಸಲಾಗಿತ್ತು.
ಆತಂಕ ಎದುರಾಗಿತ್ತು: ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆರಂಭದಲ್ಲಿಯೇ ಗ್ರಾಮೀಣ ಭಾಗದಲ್ಲಿ ಭೀಕರ ಬರದ ಹಿನ್ನೆಲೆ ಸಾವಿರಾರು ಸಂಖ್ಯೆಯ ಮತದಾರರು ಗುಳೆ ಹೋಗಿದ್ದು ತೊಡಕಾಗಿತ್ತು. ಪೂರ್ಣ ಪ್ರಮಾಣದ ಮತದಾನ ಅನುಮಾನ ಎಂಬ ಮಾತು ಆಗಲೇ ಕೇಳಿಬಂದಿತ್ತು.
ಅದೀಗ ನಿಜವಾಗಿದೆ. ಒಂದೆಡೆ ಬಿರುಬಿಸಿಲು, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಸಂಕಷ್ಟದ ಸರಮಾಲೆ ಎದುರಿಸಲಾಗದೇ ಮಹಾನಗರಗಳಲ್ಲಿ ವಾಸವಾಗಿರುವ ಗ್ರಾಮೀಣ ಭಾಗದ ಮತದಾರರು ಮತದಾನಕ್ಕೆ ಹಾಜರಾಗದಿರುವುದು ಮತದಾನದ ಪ್ರಮಾಣವನ್ನು ಪೂರ್ಣ ಪ್ರಮಾಣಕ್ಕೆ ತಲುಪಿಸಲು ಬಹುದೊಡ್ಡ ಅಡಚಣೆಯಾಗಿದ್ದು ಈಗ ಸ್ಪಷ್ಟ.
ನಗರ ಮತದಾರರ ನಿರ್ಲಕ್ಷ್ಯ: ಅದೇ ರೀತಿ ಎಂದಿನಂತೆ ರಾಯಚೂರು ನಗರ ಕ್ಷೇತ್ರದಲ್ಲಿ ಮತದಾರರು ಮತದಾನಕ್ಕೆ ಅಷ್ಟಾಗಿ ಆಸಕ್ತಿ ತೋರದಿರುವುದು ಮತದಾನದ ಪ್ರಮಾಣ ಏರಿಕೆಗೆ ತೀವ್ರ ಹಿನ್ನಡೆಗೆ ದಾರಿ ಮಾಡಿತು. ಸದ್ಯದ ಮಾಹಿತಿಯಂತೆ ಜಿಲ್ಲೆಯ ಇನ್ನಿತರ ಕ್ಷೇತ್ರಗಳ ಸರಾಸರಿ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ ರಾಯಚೂರು ನಗರ ಕ್ಷೇತ್ರದಲ್ಲಿಯೇ ಮತದಾನದ ಪ್ರಮಾಣ ತೀರಾ ಕಡಿಮೆಯಾಗಿರುವುದು ಎದ್ದು ಕಾಣುತ್ತದೆ.
ಅಲ್ಪ ತೃಪ್ತಿ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜಿಪಂ ಸಿಇಒ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮ ಸಮಿತಿಯ ಮುಖ್ಯಸ್ಥ ಜ್ಞಾನಪ್ರಕಾಶ್, ಶೇ. 100ರಷ್ಟು ಮತದಾನವನ್ನು ಜಿಲ್ಲಾಡಳಿತದಿಂದ ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಆದರೆ ಸದ್ಯದ ಪ್ರಕಾರ ಕಳೆದ ಸಾರಿಗಿಂತ ಮತದಾನದ ಪ್ರಮಾಣ ಹೆಚ್ಚಳವಾಗಿರುವುದು ಕೊಂಚಮಟ್ಟಿಗಿನ ತೃಪ್ತಿ ತಂದಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಜಿಲ್ಲಾಡಳಿತದ ತಿಂಗಳುಗಟ್ಟಲೇ ನಡೆಸಿದ ಪ್ರಯತ್ನಕ್ಕೆ ಮತದಾರರು ಮಾತ್ರ ಜಾಗೃತರಾಗದಿರುವುದು ದುರದೃಷ್ಟಕರ ಸಂಗತಿಯೇ ಸರಿ.
ಕರ್ತವ್ಯಕ್ಕೆ ಗೈರು; ಪ್ರಕರಣ ದಾಖಲು
ರಾಯಚೂರು: ಜಿಲ್ಲಾಧಿಕಾರಿಗಳ ಆದೇಶದ ಹೊರತಾಗಿಯೂ ಚುನಾವಣೆ ಕರ್ತವ್ಯಕ್ಕೆ ಹಾಜರಾಗದ 42 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ನಗರದ ತಹಸೀಲ್ದಾರ್ ಮೂಲಕ ಇಲ್ಲಿನ ಪೊಲೀಸರಿಗೆ ದೂರು ನೀಡಲಾಗಿದ್ದು, ಹನುಮಂತ ಭಜಂತ್ರಿ ಮತ್ತಿತರೆ 41 ಜನರು ಚುನಾವಣೆ ಕಾರ್ಯಕ್ಕೆ ಹಾಜರಾಗಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಆದೇಶ ಉಲ್ಲಂಘಿಸಿ ಗೈರು ಹಾಜರಾಗಿದ್ದು, ಇವರ ವಿರುದ್ಧ ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.