ಮತದಾರರ ಪಟ್ಟಿ ದೋಷ: ಬಹುತೇಕ ನಿವಾರಣೆ
ರಾಯಚೂರು: ನಗರಸಭೆ ಚುನಾವಣೆ ವೇಳೆ ಉಂಟಾಗಿದ್ದ ಮತದಾರರ ಪಟ್ಟಿಯಲ್ಲಿನ ದೋಷ ವಿಧಾನಸಭೆ ಚುನಾವಣೆಯ ಹೊತ್ತಿಗೆ ಸರಿಪಡಿಸುವಲ್ಲಿ ಜಿಲ್ಲಾಡಳಿತ ಕೊನೆಗೂ ಯಶಸ್ವಿಯಾಗಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆದ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯ ಮತದಾನದ ವೇಳೆ ರಾಜಕೀಯ ಪಕ್ಷಗಳ ಪ್ರಕಾರ ಸುಮಾರು 50 ಸಾವಿರಕ್ಕೂ ಹೆಚ್ಚಿನ ಮತದಾರರ ಹೆಸರುಗಳು ಪಟ್ಟಿಯಿಂದಲೇ ನಾಪತ್ತೆಯಾಗಿದ್ದು ತೀವ್ರ ಆಕ್ರೋಶಕ್ಕೆ ದಾರಿ ಮಾಡಿತ್ತು. ಅಷ್ಟೇ ಅಲ್ಲ ಜಿಲ್ಲಾಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಮತದಾರರಲ್ಲಿ ಸಂಶಯ ಮೂಡಿಸಿತ್ತು. ಆದರೆ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮದಿಂದ ಮತದಾರರ ಪಟ್ಟಿಯಲ್ಲಿನ ದೋಷ ಬಹುತೇಕ ನಿವಾರಣೆಯಾಗಿದೆ. ಪರಿಣಾಮ ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ನಡೆದ ವಿಧಾನಸಭೆ ಕ್ಷೇತ್ರದ ಚುನಾವಣೆಯ ಮತದಾನದ ವೇಳೆ ಕಳೆದ ಬಾರಿಯಂತೆ ಗೊಂದಲ ಉಂಟಾಗಲಿಲ್ಲ. ಮತದಾರರ ಗುರುತಿನ ಚೀಟಿಯಲ್ಲಿನ ದೋಷ. ಮತದಾರರ ಮತದಾನದ ಚೀಟಿ ವಿತರಣೆಯಲ್ಲಿ ಬಿಎಲ್ಒಗಳ ನಿರ್ಲಕ್ಷ್ಯದ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿ ಉಳಿದಂತೆ ಎಲ್ಲವೂ ಸುಸೂತ್ರ ಸಾಗಿದ್ದು ಜಿಲ್ಲಾಡಳಿತಕ್ಕೆ ನೆಮ್ಮದಿ ಉಂಟು ಮಾಡಿರಲೂಬಹುದು.
ಮತದಾರ ಪಟ್ಟಿಯಲ್ಲಿ ಗೊಂದಲ
ಮುದಗಲ್: ವಿಧಾನಸಭೆ ಚುನಾವಣೆ ಮತದಾನಕ್ಕೆ ಹುಮ್ಮಸ್ಸಿನಿಂದ ಮತಗಟ್ಟೆಗೆ ಬಂದ ಮತದಾರನಿಗೆ ನಿರಾಶೆಯಾದ ಪ್ರಸಂಗ ಭಾನುವಾರ ಪಟ್ಟಣದಲ್ಲಿ ನಡೆಯಿತು. ಹೌದು. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆಮರಳಬೇಕಾದ ಪ್ರಸಂಗ ಎದುರಾಯಿತು. ಕಳೆದ ಎರಡು ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಕೇವಲ ಎರಡು ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೆ ಇರುವುದರಿಂದ ಮತದಾರರು ಚುನಾವಣಾ ಅಧಿಕಾರಿಗಳ ಮೇಲೆ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಪಪಂ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮಾಡಿದ ಗೊಂದಲದಿಂದಾಗಿ ನೂರಾರು ಮತದಾರರ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಂಡಂತಾಗಿದೆ ಎಂದು ದೂರಿದರು.
ತಪ್ಪಿಗೆ ಹೊಣೆ ಯಾರು?: ಸರ್ಕಾರಿ ನೌಕರರಿಂದ ಮತದಾನ ಜಾಗೃತಿ ಜಾಥಾಗಳನ್ನು ಮಾಡಿದೆ. ಆದರೆ ಮುಕ್ತ ಮತದಾನ ಮಾಡಲು ಮುಂದಾದ ಮತದಾರರ ಹೆಸರುಗಳನ್ನೇ ಮತದಾರ ಪಟ್ಟಿಯಲ್ಲಿ ನಾಪತ್ತೆ ಮಾಡಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಬುದ್ಧ ಮತದಾರರು ಪ್ರಶ್ನಿಸುತ್ತಿದ್ದಾರೆ. ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಹಕ್ಕು. ಆದರೆ ಮತದಾರನ ಹೆಸರು ನಾಪತ್ತೆ ಮಾಡುವುದು ಚುನಾವಣಾ ವಿಭಾಗದ ಹಕ್ಕಾ ಎಂದು ಪ್ರಶ್ನಿಸಿದರು. ಜೀವಂತ ಇದ್ದವರ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದ್ದರೆ, ಇತ್ತ ಸತ್ತವರ ಹೆಸರುಗಳು ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಂಡಿರುವುದು ಮತದಾರ ಪಟ್ಟಿ ಎಷ್ಟರ ಮಟ್ಟಿಗೆ ಸರಿ ಇದೆ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿದೆ.