ಮೂರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ
ರಾಯಚೂರು: ಲಿಂಗಸ್ಗೂರು ತಾಲೂಕು ಕೇಂದ್ರ ಮತ್ತು ವಿಧಾನಸಭೆ ಕ್ಷೇತ್ರಕ್ಕೆ ಸೇರ್ಪಡೆ, ಮೂಲ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಲಿಂಗಸ್ಗೂರು ತಾಲೂಕಿನ ಮೂರು ಗ್ರಾಮಗಳ ಗ್ರಾಮಸ್ಥರು ಮೊದಲೇ ಜಿಲ್ಲಾಡಳಿತಕ್ಕೆ ಎಚ್ಚರಿಸಿದಂತೆ ಭಾನುವಾರ ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು. ಲಿಂಗಸ್ಗೂರು ತಾಲೂಕಿನ ಸರ್ಜಾಪುರ, ಕುಪ್ಪಿಗುಡ್ಡ ಹಾಗೂ ಅಮರಾವತಿ ಗ್ರಾಮಗಳು ಸದ್ಯ ಲಿಂಗಸ್ಗೂರು ಪಟ್ಟಣಕ್ಕೆ ಸಮೀಪದಲ್ಲಿವೆ. ಆದರೆ ಮಸ್ಕಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ. ಲಿಂಗಸ್ಗೂರು ಸಮೀಪದಲ್ಲಿದ್ದು, ಮಸ್ಕಿ ದೂರದಲ್ಲಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮಸ್ಕಿ ತಾಲೂಕು ಕೇಂದ್ರವಾಗಿ ಕಾರ್ಯಾರಂಭಿಸಿದಲ್ಲಿ ಎಲ್ಲ ಕೆಲಸ ಕಾರ್ಯಗಳಿಗೆ 35ರಿಂದ 40 ಕಿಮೀ ದೂರ ಕ್ರಮಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿ ಮತದಾನದದಿಂದ ದೂರವುಳಿದರು.ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಈ ಮೂರು ಗ್ರಾಮಗಳಲ್ಲಿ ಸೇರ್ಪಡೆಗೊಳಿಸಬೇಕು. ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆಯ ನಿವಾರಣೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದು ತಾಲೂಕು ಆಡಳಿತ ನಿರ್ಲಕ್ಷ್ಯ ತಾಳಿದ್ದರಿಂದ ಭಾನುವಾರ ಗ್ರಾಮದ ಜನತೆ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದಾಗಿ ಮತದಾನದ ನಿರೀಕ್ಷೆಯೊಂದಿಗೆ ತೆರಳಿದ್ದ ಮತಗಟ್ಟೆಯ ಸಿಬ್ಬಂದಿ ದಿನವಿಡೀ ಕಾದು ಕುಳಿತುಕೊಳ್ಳುವಂತಾಯಿತು.