ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಿಲ್ಲೆಗೆ 14ನೇ ಸ್ಥಾನ
ರಾಯಚೂರು: ಕಳೆದ ಏಪ್ರಿಲ್ 1ರಿಂದ 10ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಉತ್ತಮಗೊಂಡಿದ್ದು, ರಾಜ್ಯದಲ್ಲಿಯೇ ಫಲಿತಾಂಶ ಶೇಕಡಾವಾರು ಉತ್ತೀರ್ಣ ಪ್ರಮಾಣದಲ್ಲಿ ಜಿಲ್ಲೆಗೆ 14ನೇ ಸ್ಥಾನ ದೊರೆತಿದೆ.
ಕಳೆದ ಬಾರಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು 23ನೇ ಸ್ಥಾನದಲ್ಲಿತ್ತು. ಅದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿವಿಧ ತರಬೇತಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಶೇ. 82ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಕಳೆದ ಬಾರಿ ಉತ್ತೀರ್ಣರಾದವರ ಪ್ರಮಾಣ ಶೇ. 79ರಷ್ಟಾಗಿತ್ತು. ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಶೇ. 3ರ ಏರಿಕೆಯಾಗಿದೆ ಎಂದು ಡಿಡಿಪಿಐ ಕಚೇರಿ ತಿಳಿಸಿದೆ.
'ರಾಷ್ಟ್ರಗೀತೆ ಬಗ್ಗೆ ಗೌರವ, ಶ್ರದ್ಧೆ ಇರಲಿ'
ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪಿನ ಜ್ಞಾನಜ್ಯೋತಿ ವಿದ್ಯಾ ಕೇಂದ್ರದಲ್ಲಿ ಸೋಮವಾರ ಭಾರತ ಭಾವನಾ ದಿವಸ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯರಾದ ಮಲ್ಲಣ್ಣಾ ಡಂಗಿ, ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನಮ್ಮ ರಾಷ್ಟ್ರಗೀತೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಹಾಡುವ ಮೂಲಕ ಭಾರತೀಯರ ಭಾವನಾತ್ಮಕ ಭಾವೈಕ್ಯ ಮತ್ತು ರಾಷ್ಟ್ರೀಯ ಭಾವೈಕ್ಯವನ್ನು ಇಡೀ ವಿಶ್ವವೇ ನೋಡುವಂತೆ ಮಾಡೋಣ ಎಂದು ಹೇಳಿದರು.