ಚುನಾವಣೆಯಲ್ಲಿ ಗೆಲವು ಖಚಿತ: ಪಾಟೀಲ್
ಮಸ್ಕಿ: ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಮ್ಮ ಗೆಲವು ನಿಶ್ಚಿತ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿರುವುದು ಸಂತಸ ತಂದಿದೆ. ರಾಜಕಾರಣದಲ್ಲಿ ಜಯಗಳಿಸುವುದಕ್ಕಾಗಿ ತಂತ್ರಗಳನ್ನು ಹೆಣೆಯುವುದು ಸಹಜ. ಆದರೆ ಅನುಕಂಪದ ಮತಗಳಿಸುವುದಕ್ಕಾಗಿ ಕೆಜೆಪಿ ಅಭ್ಯರ್ಥಿ ಮಹಾದೇವಪ್ಪಗೌಡ ಪಾಟೀಲ್ ಹತಾಶೆಯಿಂದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಹಲ್ಲೆಯ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಆ ಮೂಲಕ ತಮಗೆ ಕಳಂಕ ತರುವ ವ್ಯರ್ಥ ಪ್ರಯತ್ನ ಮಾಡಿದ್ದಾರೆಂದು ಟೀಕಿಸಿದರು.
ಮಸ್ಕಿ ಕ್ಷೇತ್ರದ ಜನತೆಗೆ ತಾವು ಎಂಥ ವ್ಯಕ್ತಿ ಎಂಬುದರ ಅರಿವಿದೆ. ಇದುವರೆಗೂ ವಿವಾದಗಳಿಂದ ದೂರವಿದ್ದು, ಪಾರದರ್ಶಕವಾಗಿ ರಾಜಕಾರಣ ಮಾಡಿರುವುದಾಗಿ ತಿಳಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ತಮ್ಮ ನಡೆ, ನುಡಿ ಎರಡೂ ಒಂದೇ ಆಗಿದ್ದು ತಾವು ಮಾಡಿದ ಅಭಿವೃದ್ಧಿ ಕೆಲಸಗಳೇ ತಮಗೆ ಶ್ರೀರಕ್ಷೆಯಾಗಿವೆ ಎಂದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ ಇದ್ದರು.