ಠಾಣೆಗೆ ಬಿಜೆಪಿ ಅಭ್ಯರ್ಥಿ ಶಿವನಗೌಡ ಹಾಜರು
ಕ.ಪ್ರ. ವಾರ್ತೆ ದೇವದುರ್ಗ ಮೇ 6-
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಹಾಗೂ ಕರ್ತವ್ಯ ನಿರತ ಕೇಂದ್ರ ಅರೆ ಸೇನಾ ಪಡೆ ಯೋಧನೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿಗೆ ಸಂಬಂಧಿಸಿದಂತೆ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಸೋಮವಾರ ಗಬ್ಬೂರು ಠಾಣೆಗೆ ಹಾಜರಾಗಿ ಜಾಮೀನು ಪಡೆದು, ಬಿಡುಗಡೆಗೊಂಡಿದ್ದಾರೆ. ಕ್ಷೇತ್ರದಲ್ಲಿ ಭಾನುವಾರ ನಡೆದ ಮತದಾನದ ವೇಳೆ ಮಸರಕಲ್ ಗ್ರಾಮದ ಮತಗಟ್ಟೆಯನ್ನು ಪ್ರವೇಶಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಹಾಗೂ ಕೇಂದ್ರ ಅರೆ ಸೇನಾ ಪಡೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಸಿಬ್ಬಂದಿ ದಾಮೋದರ್ ಎಂಬವವರು ಗಬ್ಬೂರು ಪೊಲೀಸರಿಗೆ ದೂರಿತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನಾಯಕ ತಮ್ಮ ವಕೀಲರಾದ ಬಸವರಾಜ ಗೌರಂಪೇಟ್ ಅವರ ಮೂಲಕ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆಂದು ಗಬ್ಬೂರು ಠಾಣೆಯ ಪಿಎಸ್ಸೈ ಅಮರೇಶ್ ತಿಳಿಸಿದ್ದಾರೆ.