ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧನೂರು: ಬೆಟ್ಟಿಂಗ್ ಭರಾಟೆ ಶುರು

Lingaraj Badiger
Updated On : 7 May 2013, 10:54 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 6ರಾಜ್ಯ ವಿಧಾನಸಭೆಗೆ ತಮ್ಮ ಕ್ಷೇತ್ರದ ಶಾಸಕರನ್ನು ಆಯ್ಕೆಗೆ ಮತದಾರಪ್ರಭು ತನ್ನ ಹಕ್ಕು ಚಲಾಯಿಸಿದ್ದಾನೆ. ಆದರೆ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇನ್ನೊಂದೆಡೆ ಈ ಇವರ ಬೆಂಬಲಿಗರು ತಮ್ಮ ತಮ್ಮ ನಾಯಕರ ಸೋಲು- ಗೆಲವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಪರ- ವಿರೋಧವಾಗಿ ಬೆಟ್ಟಿಂಗ್ನಲ್ಲಿ ನಿರತರಾಗಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ತಾಲೂಕಿನ ಇತಿಹಾಸದಲ್ಲಿ ಅತ್ಯಂತ ಶಾಂತಯುತ ಚುನಾವಣೆ ಎಂದೇ ಹೇಳಲಾಗುತ್ತಿದೆ. ಕಣದಲ್ಲಿರುವ ಒಟ್ಟು 14 ಜನ ಅಭ್ಯರ್ಥಿಗಳ ಪೈಕಿ ಐವರು ಪ್ರಮುಖ ಸ್ಪರ್ಧಿಗಳು. ಅದರಲ್ಲಿ ಹಾಲಿ ಶಾಸಕ ವೆಂಕಟರಾವ ನಾಡಗೌಡ ಜೆಡಿಎಸ್ನಿಂದ, ಕಾಂಗ್ರೆಸ್ನಿಂದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಬಿಜೆಪಿಯಿಂದ ಕೊಲ್ಲಾ ಶೇಷಗಿರಿರಾವ್, ಬಿಎಸ್ಸಾರ್ ಕಾಂಗ್ರೆಸ್ನಿಂದ ಕೆ.ಕರಿಯಪ್ಪ, ಕೆಜೆಪಿಯಿಂದ ರಾಜಶೇಖರ ಪಾಟೀಲ ಅವರುಗಳು ಗೆಲ್ಲಲೇಬೇಕೆಂಬ ಛಲದೊಂದಿಗೆ ಅಖಾಡದಲ್ಲಿದ್ದರು.ನಾಳೆ ಹಣೆಬರೆಹ ಪ್ರಕಟ: ಶತಾಯಗತಾಯ ವಿಧಾನಸೌಧ ಪ್ರವೇಶಿಸಿಯೇ ತೀರಬೇಕೆಂದು ಚುನಾವಣೆ ಘೋಷಣೆಯಾದ ದಿನದಿಂದ ತಮ್ಮದೇ ಆದ ಚುನಾವಣಾ ತಂತ್ರಗಳನ್ನು ಬಳಸಿದ್ದರು. ಆದರೆ ಅವರ ಪ್ರಯತ್ನಕ್ಕೆ ಅದ್ಹೇಗೆ ಸ್ಪಂದಿಸುವನೋ ಗೊತ್ತಿಲ್ಲ. ಈಗಾಗಲೇ ಇವರ ಹಣೆಬರಹವಂತೂ ಬರೆದಿದ್ದು, ಅದು ಮೇ 8ರ ಮಧ್ಯಾಹ್ನದ ವೇಳೆಗೆ ಪ್ರಕಟಗೊಳ್ಳಲಿದೆ.ಜೆಡಿಯುನಿಂದ ಶಾಂತಗೌಡ ಜಾಗೀರದಾರ, ಸಿಪಿಐನಿಂದ ಬಾಷುಮೀಯಾ, ಸಿಪಿಎಂನಿಂದ ರಮೇಶ ಪಾಟೀಲ, ಬಿಎಸ್ಪಿಯಿಂದ ಎಂ.ಕೆ. ಜಗ್ಗೇಶ್ ಸೇರಿದಂತೆ ಪಕ್ಷೇತರರು ಕಣದಲ್ಲಿದ್ದರು. ಕಳೆದ ಬಾರಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕೂಡಿದ್ದರಿಂದ ಜನತೆ ಅಸಮಾಧಾನಗೊಂಡು ಮೂರನೇ ವ್ಯಕ್ತಿಯಾದ ವೆಂಕಟರಾವ ನಾಡಗೌಡರಿಗೆ ಆಶೀರ್ವದಿಸಿದ್ದರು.ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್: ಆದರೆ ಈ ಬಾರಿ ಅವರಿಗೆ ಆಡಳಿತ ವಿರೋಧಿ ಅಲೆ ಹಾಗೂ ಸ್ವಪಕ್ಷೀಯರ ಅಪಪ್ರಚಾರದಿಂದ ಅವರ ಅನೇಕ ಅಭಿವೃದ್ಧಿ ಕೆಲಸಗಳು ಗೌಣವಾದವು. ಇನ್ನೊಂದೆಡೆ ಕಾಂಗ್ರೆಸ್ ಈ ಬಾರಿ ಗ್ರಾಪಂ.ನಿಂದ ಹಿಡಿದು ಜಿಪಂ, ನಗರಸಭೆವರೆಗೆ ಭಾರಿ ಜಯಭೇರಿ ಬಾರಿಸಿದ್ದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿತ್ತು. ಆದರೆ ಹೊಸ ಬಸ್ ನಿಲ್ದಾಣದ ಉದ್ಘಾಟನೆ ವಿಳಂಬ, ಸರ್ಕ್ಯೂಟ್ ಹೌಸ್ನ ಆತುರದ ಉದ್ಘಾಟನೆಯ ತೂಗುಗತ್ತಿ ಅವರ ತಲೆಯ ಮೇಲೆ ಹಾಗೆಯೇ ಇತ್ತು. ಇದನ್ನು ಪ್ರತಿಪಕ್ಷದವರು ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು.ಕೊನೆವರೆಗೂ ಹರಸಾಹಸ: ಬಿಜೆಪಿಯ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ವಲಸಿಗರು, ಕ್ಷೇತ್ರಕ್ಕೆ ಹೊಸಬರು ಎಂಬ ಕಾರಣಗಳಿಂದ ಕ್ಷೇತ್ರದ ಜನತೆ ಅವರನ್ನು ಅಪ್ಪಿಕೊಳ್ಳುವಲ್ಲಿ ಹಿಂದೇಟು ಹಾಕಿದರೆನ್ನಲಾಗಿದ್ದು, ಆಂಧ್ರದವರ ಮತಗಳ ಮೇಲೆ ಕಣ್ಣಿಟ್ಟೇ ಚುನಾವಣೆಗೆ ಸ್ಪರ್ಧಿಸಿದ್ದ ಇವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆ ಜನತೆ ಕೈ ಹಿಡಿದಿರುವ ಸಂಭವ ಕಡಿಮೆ. ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಕರಿಯಪ್ಪನವರು ಶ್ರೀರಾಮುಲು ಅಲೆ, ನಾಯಕ ಜನಾಂಗದ ಮತಗಳು, ತಮ್ಮ ಸಮಾಜದ ಮತಗಳು ಸೇರಿದಂತೆ ಹಿಂದುಳಿದ ವರ್ಗಗಳ ಮತಗಳನ್ನು ನಂಬಿಕೊಂಡು ಸ್ಪರ್ಧಿಸಿದ್ದರು. ಕೆಜೆಪಿ ಅಭ್ಯರ್ಥಿ ರಾಜಶೇಖರ ಪಾಟೀಲರು ಮಾವ ಹಂಪನಗೌಡ ಬಾದರ್ಲಿಯವರ ಮೇಲಿನ ಸಿಟ್ಟು ಹಾಗೂ ಅವಕಾಶ ಕೊಡಲಿಲ್ಲವೆಂಬ ನೋವಿನಿಂದ ಸ್ಪರ್ಧಿಸಿದ್ದರು. ಈ ಐದು ಜನ ಅಭ್ಯರ್ಥಿಗಳು ಮತದಾನ ಮುನ್ನಾ ದಿನದವರೆಗೆ ಶಕ್ತಿ ಮೀರಿ ತಮ್ಮ ಗೆಲವಿಗೆ ಚುನಾವಣೆಯ ಎಲ್ಲ ಪಟ್ಟುಗಳನ್ನು ಅನುಸರಿಸಿ ಪ್ರಯತ್ನಿಸಿದ್ದರು.ಮತದಾನ ಮುಗಿದ ಮೇಲೆ ಎಲ್ಲ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಯಾವ ಯಾವ ಬೂತ್ಗಳಲ್ಲಿ ತಮಗೆ ಹೆಚ್ಚಿಗೆ ಮತಗಳು ಬಂದಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೆಂಬಲಿಗರು ತಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆಂದು ಲೆಕ್ಕಾಚಾರಗಳನ್ನು ಹಾಕಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಬೆಟ್ಟಿಂಗ್ 5 ಸಾವಿರದಿಂದ 50 ಸಾವಿರವರೆಗೆ ನಡೆದಿದೆ ಎಂದು ತಿಳಿದು ಬಂದಿದೆ. ಎಲ್ಲದಕ್ಕೂ ಮೇ 5ರ ವರೆಗೆ ಎಲ್ಲರೂ ಕಾಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement