ಆತ್ಮ ಲಿಂಗವೇ ದೇವರೆಂಬ ಭಾವನೆ
ಕನ್ನಡಪ್ರಭ ವಾರ್ತೆ , ಸಿಂಧನೂರು , ಮೇ 7
ಕಲ್ಲು ದೇವರು, ಮಣ್ಣು ದೇವರು ಮತ್ತು ಮರ ದೇವರುಗಳನ್ನು ಪೂಜೆ ಮಾಡದೇ ಶಿವನ ಸ್ವರೂಪದಲ್ಲಿರುವ ಆತ್ಮ ಲಿಂಗವೇ ದೇವರೆನ್ನುವ ಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಇಳಕಲ್ಲ ಡಾ. ಮಹಾಂತಪ್ಪಗಳು ಸಲಹೆ ನೀಡಿದರು.
ಬಸವ ಜಯಂತಿ ಉತ್ಸವದ ಅಂಗವಾಗಿ ಆರಂಭವಾದ ಶರಣರು ಕಂಡ ಬಸವಣ , ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನೂರೆಂಟು ಗುಡಿ ಗುಂಡಾರಗಳನ್ನು ತಿರುಗುವ ಅನಿಷ್ಟ ಪದ್ಧತಿಯನ್ನು ಕೈಬಿಟ್ಟು ಶರಣ ಸತಿ ಲಿಂಗಪತಿ ತತ್ವವನ್ನು ತಿಳಿದುಕೊಳ್ಳಬೇಕು. ದೇಹವೆಂಬ ದೇಗುಲವೇ ನಮ್ಮದಾಗಿರುವ ಸ್ಥಾವರ ಸ್ವರೂಪದ ದೇಗುಲಗಳಿಗೆ ಹೋಗಬಾರದು. ತನ್ನ ತಾನರಿಯದೆ ಸ್ಥಾವರಗಳನ್ನು ಆರಾಧಿಸುವುದು ಶರಣರ ದೃಷ್ಟಿಯಲ್ಲಿ ಧಾರ್ಮಿಕ ಹಾದರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯಾರು ಜಂಗಮರು?: ಅರಿವು, ಆಚಾರ ಮತ್ತು ಅನುಭವದಲ್ಲಿ ತೊಡಗಿದವರು ನಿಜವಾದ ಭಕ್ತರು, ಕಾಯಕವೇ ಕೈಲಾಸವೆಂದು ಭಾವಿಸಿ ಪ್ರತಿಫಲ ಅಪೇಕ್ಷೆಯಿಲ್ಲದೆ ದುಡಿಯುವ ವ್ಯಕ್ತಿಯನ್ನು ಶರಣರು ಜಂಗಮರೆಂದು ಕರೆದಿದ್ದಾರೆಂದು ಉಪನ್ಯಾಸಕ ಶಿವಕುಮಾರ ಹೇಳಿದರು.
ಧ್ಯಾನ ಮತ್ತು ಯೋಗದಿಂದ ಮನುಷ್ಯ ಜ್ಞಾನಿಯಾಗುತ್ತಾನೆ. ಮೃತ್ಯುಲೋಕದ ಮಹಾಮನೆ ಹಾಳಾಗಬಾರದೆಂದು ಪರಮಾತ್ಮನು ಬಸವಣನನ್ನು ಭೂಮಿಗೆ ಕಳುಹಿಸಿದ್ದಾನೆಂಬ ಅಲ್ಲಮಪ್ರಭು ವಚನವನ್ನು ಪ್ರವಚನಕಾರ ಅಂಬಿಗರ ಚೌಡಯ್ಯ ಗುರುಪೀಠದ ಮಲ್ಲಿಕಾರ್ಜುನ ಸ್ವಾಮೀಜಿ ವಿವರಿಸಿದರು.
ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ಯುವಬಸವಕೇಂದ್ರದ ಅಧ್ಯಕ್ಷ ಶೇಖರ ಯರದಿಹಾಳ, ವೀರಶೈವ ಸಂಘದ ಅಧ್ಯಕ್ಷ ಅಶೋಕ ಗದ್ರಟಗಿ, ನಿವೃತ್ತ ಶಿಕ್ಷಕ ಧರಯ್ಯಸ್ವಾಮಿ, ವೀರಭದ್ರಗೌಡ ದೇವರಡ್ಡಿ, ಸುದ್ದಿಬಿಂಬ ಸಂಪಾದಕ ಡಿ.ಎಚ್. ಕಂಬಳಿ, ಸಂಜೆವಾಣಿ ವರದಿಗಾರ ಶರಣಪ್ಪ ಗೋನಾಳ ಮತ್ತಿತರರು ಉಪಸ್ಥಿತರಿದ್ದರು. ವೀರಭದ್ರಪ್ಪ ಕುರಕುಂದಿ ಸ್ವಾಗತಿಸಿದರು. ಡಾ. ಶರಭನಗೌಡ ನಿರೂಪಿಸಿದರು. ವೀರೇಶ ಸಾಲಿಮಠ ವಚನ ಪ್ರಾರ್ಥನೆ ಮಾಡಿದರು.