ಮತ ಎಣಿಕೆ: ಮೊಬೈಲ್, ಕ್ಯಾಮೆರಾ, ಲ್ಯಾಪ್ಟಾಪ್ ನಿಷೇಧ
ರಾಯಚೂರು: ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಗೆ ಈಚೆಗೆ ನಡೆದ ಮತದಾನದ ಮತ ಎಣಿಕೆಯ ಕಾರ್ಯ ನಗರದಲ್ಲಿ ಮೇ 8ರಂದು ನಡೆಯಲಿದ್ದು ಮತ ಎಣಿಕೆ ಕೇಂದ್ರದೊಳಕ್ಕೆ ಮೊಬೈಲ್ ಸೇರಿದಂತೆ ವಿವಿಧ ಸಾಮಗ್ರಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಆದೇಶ ಹೊರಡಿಸಿದ್ದು, ಮೇ 8ರಂದು ನಗರದ ಎಲ್.ವಿ.ಡಿ. ಕಾಲೇಜು ಹಾಗೂ ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆಗಾಗಿ ನಿಯುಕ್ತಿಗೊಂಡ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಎಣಿಕೆ ಕೇಂದ್ರದಲ್ಲಿ ವಿದ್ಯುನ್ಮಾನ ಉಪಕರಣಗಳಾದ ಮೊಬೈಲ್ ಫೋನ್, ಕ್ಯಾಮೆರಾ, ಲ್ಯಾಪ್ಟಾಪ್ ಮತ್ತಿತರೆ ಸಾಮಗ್ರಿ ಕೊಂಡೊಯ್ಯದಂತೆ ಸೂಚಿಸಿದ್ದಾರೆ.