ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾನವಿ; ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ

Vishwanath S
Updated On : 8 May 2013, 4:33 am

ರಾಯಚೂರು: ಮಾನವಿ ತಾಲೂಕಿನ ಕುರ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಂಜುಳಾ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92.32 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮೆರೆದಿದ್ದಾಳೆ.
ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮಂಜುಳಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 577 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆಂದು ಶಾಲೆಯ ಮುಖ್ಯಗುರುಗಳು ತಿಳಿಸಿದ್ದಾರೆ.
ವಿಜ್ಞಾನ ಕಾಲೇಜು ಸಾಧನೆ: ನಗರದ ವಿಜ್ಞಾನ ರೆಸಿಡೆನ್ಶಿಯಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸತತ ನಾಲ್ಕನೇ ಬಾರಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಗಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಶಾಲೆಯ ಮುಖ್ಯಗುರುಗಳು 2012- 13ನೇ ಸಾಲಿಗೆ ಶಾಲೆಯ 25 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು ಅವರಲ್ಲಿ ಎಲ್ಲರೂ ಉತ್ತೀರ್ಣರಾಗುವ ಮೂಲಕ ಸತತ ನಾಲ್ಕನೇ ವರ್ಷ ಶಾಲೆಗೆ ಪೂರ್ಣ ಪ್ರಮಾಣದ ಫಲಿತಾಂಶ ತಂದುಕೊಟ್ಟಿದ್ದಾರೆಂದು ತಿಳಿಸಿದ್ದಾರೆ.

ಸುನಿಲ್‌ಕುಮಾರ್‌ಗೆ ಶೇ.96 ಫಲಿತಾಂಶ
ಸಿಂಧನೂರು: ತಾಲೂಕಿನ ಬಳಗಾನೂರು ಸುನಿಲ್‌ಕುಮಾರ್ ಎಸ್ಸೆಸ್ಸೆಲ್ಸಿಯಲ್ಲಿ ಶೇ. 96 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಾಗರಬೆಟ್ಟ ಎಸ್‌ಡಿಕೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುನಿಲ್ ಕನ್ನಡ 124, ಇಂಗ್ಲಿಷ್‌ನಲ್ಲಿ 95, ಹಿಂದಿ 94, ಗಣಿತ 97, ಸಮಾಜ ವಿಜ್ಞಾನ 96, ವಿಜ್ಞಾನದಲ್ಲಿ 94 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಠಾಣೆಯ ಸಿಬ್ಬಂದಿ, ಗ್ರಾಮದ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ. ಇವರು ಬಳಗಾನೂರ ಠಾಣೆಯ ಮುಖ್ಯಪೇದೆ ಕಾಶಪ್ಪ ಹಳ್ಳೂರ ಅವರ ಪುತ್ರರಾಗಿರುತ್ತಾರೆ.

ಆದಿತ್ಯ ಕಾಲೇಜಿಗೆ ಶೇ.77 ಫಲಿತಾಂಶ
ಸಿಂಧನೂರು: ಆದಿತ್ಯ ಸ್ವತಂತ್ರ ಪಪೂ ಕಾಲೇಜು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.77ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2 ಉನ್ನತ ಶ್ರೇಣಿ, 27 ಪ್ರಥಮ ದರ್ಜೆ, 23 ದ್ವಿತೀಯ ದರ್ಜೆ ಹಾಗೂ 23 ತೃತೀಯ ದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಕಾಸ ಭಾರತಿ ಶಾಲೆಗೆ...
ಸಿಂಧನೂರು: ಸ್ಥಳೀಯ ವಿಕಾಸ ಭಾರತಿ ವಸತಿ ಶಾಲೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 71 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2 ಉನ್ನತ ಶ್ರೇಣಿ, 26 ಪ್ರಥಮ, 16 ದ್ವಿತೀಯ ಹಾಗೂ 19 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಗೆ ಅತೀ ಹೆಚ್ಚು ಅಂಕ ವೇಣುಗೋಪಾಲ 559 ಅಂಕ(ಶೇ. 89.92), ಕಲ್ಯಾಣಿ 532 ಅಂಕ(ಶೇ.85) ಪಡೆದುಕೊಂಡಿದ್ದಾರೆ. ಸಾಧನೆಗೆ ಸಂಸ್ಥೆ ಅಧ್ಯಕ್ಷ ಜಿ. ಮುನೇಶ್ವರಾವ್ ಅಭಿನಂದಿಸಿದ್ದಾರೆ.

13ರಂದು ಬಸವ ಜಯಂತಿ ಆಚರಣೆ
ರಾಯಚೂರು: ಜಿಲ್ಲಾಡಳಿತ, ಬಸವ ಜಯಂತ್ಯುತ್ಸವ ಸಮಿತಿ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಮೇ 13ರಂದು ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8.30ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ, ನಂತರದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9 ಗಂಟೆಗೆ ಬಸವ ಜಯಂತಿ ಕುರಿತು ವಚನ ಗಾಯನ, ಬಸವಾದಿ ಶರಣರ ಕುರಿತು ಚಿಂತನಾಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಂಜೆ 4ಕ್ಕೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಆಯೋಜಿಸಿದ್ದು, ಪ್ರಮುಖರಾದ ಮಹಾಂತಗೌಡ ಗುಮಗೇರಿ, ಸಿ.ಬಿ. ಪಾಟೀಲ್, ಬಿ. ಬಸವರಾಜಪ್ಪ ವಕೀಲರು, ಚನ್ನಬಸವ ಮಹಾಜನಶೆಟ್ಟಿ, ಮಲ್ಲಿಕಾರ್ಜುನ ಗುಡಿಮನಿ, ದುರ್ಗಾಪ್ರಸಾದ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಬಸವ ಸಮಿತಿಯ ಪ್ರಮುಖ ಗಂಗಾಧರ ತಿಳಿಸಿದ್ದಾರೆ.

'ಸರ್ವರಲ್ಲೂ ರಾಷ್ಟ್ರಪ್ರೇಮ ಮೂಡಲಿ'
ಸಿಂಧನೂರು: ಜಾತಿ- ಮತ- ಪಂಥ, ಭಾಷೆ- ಲಿಂಗ- ವಯೋವುತಿ, ಭೇದ- ಭಾವವಿಲ್ಲದೇ ವಿಭಿನ್ನತೆಯಲ್ಲಿ ಏಕತೆಯನ್ನು ಮೂಡಿಸುವ ರಾಷ್ಟ್ರಪ್ರೇಮ ಸರ್ವರಲ್ಲೂ ಮೂಡಲಿ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ.ಭಾಸ್ಕರ್ ಆಶಯ ವ್ಯಕ್ತಪಡಿಸಿದರು. ನಗರದ ಹೋಲಿ ಫ್ಯಾಮಿಲಿ ಶಾಲಾ ಮೈದಾನದಲ್ಲಿ ಸಹಾರಾ ಇಂಡಿಯಾ ಪರಿವಾರದ ಕಾರ್ಯಕರ್ತರಿಂದ ದೇಶದಾದ್ಯಂತ ರಾಷ್ಟ್ರಗೀತೆ ಹಾಡಿ ವಿಶ್ವದಾಖಲೆ ನಿರ್ಮಾಣದ ಭಾರತ ಭಾವನಾ ದಿವಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಜೆ.ಎನ್. ಇರಕಲ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾರ್ವತಿ ಅಕ್ಕ, ಆರ್‌ಜಿಎಂ ಶಾಲೆಯ ಮುಖ್ಯ ಗುರು ರಾಜಶೇಖರ ಖಾನಾಪೂರ ಮಾತನಾಡಿದರು. ಸಹಾರಾ ಇಂಡಿಯಾ ಪರಿವಾರ ಶಾಖಾ ವ್ಯವಸ್ಥಾಪಕ ಬಿ.ರಾಮ್‌ಕುಮಾರ ಸ್ವಾಗತಿಸಿದರೆ, ಸಹಾರಾ ಸಮನ್ವಯಾಧಿಕಾರಿ ಆಂಥೋನಿ ಕಿನ್ನಾಳ ನಿರೂಪಿಸಿದರು.

ಶಿವಂಗಿ; ವ್ಯಕ್ತಿ ಕಾಣೆ
ರಾಯಚೂರು: ದೇವದುರ್ಗ ತಾಲೂಕಿನ ಶಿವಂಗಿ ಗ್ರಾಮದಿಂದ ವ್ಯಕ್ತಿಯೊಬ್ಬ ಕಾಣೆಯಾಗಿದ್ದಾನೆ. ಕಾಣೆಯಾದಾತನನ್ನು ಗ್ರಾಮದ ರಾಮಣ್ಣ ಎಂದು ಗುರುತಿಸಲಾಗಿದೆ. ಈತ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿದ್ದು, ಅಲ್ಲಿಂದ ಮರಳಿಲ್ಲ ಎಂದು ಪೊಲೀಸರಿಗೆ ದೂರಲಾಗಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಹಿಳೆ ಕಾಣೆ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದಿಂದ ಮಹಿಳೆಯೊಬ್ಬಳು ಕಾಣೆಯಾಗಿದ್ದಾಳೆ. ಕಾಣೆಯಾದಾಕೆಯನ್ನು ಶಿವಲೀಲಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿಯ ಮನೆಯಿಂದ ಹೊರಹೋಗಿದ್ದು ವಾಪಸ್ ಬಾರದೇ ಕಾಣೆಯಾಗಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement