ಅಭಿವೃದ್ಧಿಗೆ ಆದ್ಯತೆ, ಒಳಚರಂಡಿ ವ್ಯವಸ್ಥೆಗೆ ಒತ್ತು: ಬಾದರ್ಲಿ
ಸಿಂಧನೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ 13016 ಮತಗಳ ಅಂತರದಿಂದ ಬುಧವಾರ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಗರ ಸೇರಿದಂತೆ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಗುಲಾಲ್ ಹಾಕಿಕೊಂಡು ಸಂಭ್ರಮಿಸಿದರು. ಪಕ್ಷದ ಧ್ವಜಗಳನ್ನು ವಿವಿಧ ವಾಹನಗಳಲ್ಲಿ ಇಟ್ಟುಕೊಂಡು ಮೆರವಣಿಗೆ ನಡೆಸಿ ಅಭ್ಯರ್ಥಿ ಪರ ಜೈಕಾರ ಹಾಕಿದರು.
ರಾಯಚೂರಿನಲ್ಲಿ ಮತ ಎಣಿಕೆ ಆರಂಭದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಮುನ್ನಡೆಯಲ್ಲಿದ್ದರು. ಮಧ್ಯೆ ಎರಡು ಮೂರು ಸುತ್ತುಗಳಲ್ಲಿ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಸ್ವಲ್ಪ ಮುನ್ನಡೆ ಸಾಧಿಸಿದ್ದನ್ನು ಹೊರತು ಪಡಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕೊನೆಯ ಸುತ್ತಿನವರೆಗೆ ಮುನ್ನಡೆ ಸಾಧಿಸಿದರು.
ದೂರದರ್ಶನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಹಂಪನಗೌಡ ವಿಜಯಿ ಎಂಬ ಸುದ್ದಿ ನೋಡುತ್ತಿದ್ದಂತೆ ಪುಳಕಿತರಾದ ಕಾರ್ಯಕರ್ತರು ಬಾದರ್ಲಿಯವರ ಮನೆಗೆ ಗುಂಪುಗುಂಪಾಗಿ ದೌಡಾಯಿಸಿದರು. ಬಾದರ್ಲಿಯವರ ಮನೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡರು. ಎಲ್ಲರೂ ಪರಸ್ಪರ ಕೆಂಪು ಬಣ್ಣವನ್ನು ಹಾಕಿಕೊಂಡರು.
ಬಾದರ್ಲಿ ಪರ ಜೈಕಾರ ಹಾಕುತ್ತಾ ನಗರದ ಪ್ರಮುಖ ವೃತ್ತಗಳಲ್ಲಿ, ವಿವಿಧ ವಾರ್ಡ್ಗಳ ಕಾಂಗ್ರೆಸ್ ಮುಖಂಡರ ಮನೆ ಮುಂದೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ವಿವಿಧ ಗ್ರಾಮಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಬಾದರ್ಲಿಯವರ ನಿವಾಸಕ್ಕೆ ವಿವಿಧ ವಾಹನಗಳಲ್ಲಿ ಆಗಮಿಸಿ ಬಣ್ಣ ಹಾಕಿಕೊಂಡು ಸಂತಸಪಟ್ಟರು.
ಅಭಿವೃದ್ಧಿ ಕಾರ್ಯಗಳಿಗೆ ಒತ್ತು: ತಾಲೂಕಿನಾದ್ಯಂತ ಜನತೆ ಮತ್ತೊಮ್ಮೆ ತಮ್ಮನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಆಶೀರ್ವದಿಸಿದ್ದಾರೆ. ಜನತೆಯ ನಿರೀಕ್ಷೆಗೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದಾಗಿ ಸಿಂಧನೂರಿನ ನೂತನ ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.
ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಮೊದಲು ಕುಡಿವ ನೀರಿಗೆ ಆದ್ಯತೆ ನೀಡುತ್ತೇನೆ. ಬಿರು ಬೇಸಿಗೆಯಲ್ಲಿ ಜನ, ಜಾನುವಾರುಗಳು ಕೆಲ ಕಡೆ ನೀರಿಲ್ಲದೆ ತತ್ತರಿಸುತ್ತಿವೆ. ವಿದ್ಯುತ್, ರಸ್ತೆ, ಒಳಚರಂಡಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ನಗರಸಭೆಯಲ್ಲಿ ವಿಶ್ವ ಬ್ಯಾಂಕ್ ನೆರವಿನ ಯುಜಿಡಿ ಯೋಜನೆ ಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖರಾಗುವುದಾಗಿ ಹೇಳಿದರು.