ಮತದಾರರಿಗೆ ನಿರಾಸೆ ಮಾಡಲ್ಲ: ಪಾಟೀಲ್
ರಾಯಚೂರು: ರಾಯಚೂರು ನಗರ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಯುವ ಅಭ್ಯರ್ಥಿ ಎಂದೇ ತಮ್ಮನ್ನು ಬೆಂಬಲಿಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುವುದಾಗಿ ವಿಜಯಿ ಅಭ್ಯರ್ಥಿ ಜೆಡಿಎಸ್ನ ಡಾ.ಶಿವರಾಜ್ ಪಾಟೀಲ್ ಹೇಳಿದರು. ನಗರದಲ್ಲಿ ಬುಧವಾರ ಫಲಿತಾಂಶ ಪ್ರಕಟಣೆ ನಂತರ ಗೆಲವಿನ ಸಂಭ್ರಮವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡು, ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದವರ ಸೋಲಿಗೆ ಕಾರಣಗಳ ಬಗ್ಗೆ ಹೆಚ್ಚು ವಿಶ್ಲೇಷಣೆ ಅಗತ್ಯವಿಲ್ಲ. ಮತದಾರರು ತಮ್ಮನ್ನು ಗೆಲ್ಲಿಸಿದ್ದು ಅವರಿಗೆ ನಿರಾಸೆಯಾಗದಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಮೂಲಸೌಲಭ್ಯಗಳ ಕೊರತೆ ಜತೆಗೆ ರಾಯಚೂರು ನಗರದ ಸಮಗ್ರ ಅಭಿವೃದ್ಧಿ ತಮ್ಮ ಮುಂದಿನ ಗುರಿಯಾಗಿದೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.