ಮಳೆ ಹುಡುಗಿಗೆ ಮತಗಳ ಬರ; ಠೇವಣಿಯೂ ಸಿಗಲಿಲ್ಲ!
ರಾಯಚೂರು: ನಗರ ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ನಟಿ ಪೂಜಾಗಾಂಧಿ ಚುನಾವಣೆಯಲ್ಲಿ ಸೋಲು ಕಂಡಿದ್ದಷ್ಟೇ ಅಲ್ಲ, ಠೇವಣಿ ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದಾರೆ. ಜಿಲ್ಲೆಗೆ ಭೇಟಿಯನ್ನೇ ನೀಡದ ಪೂಜಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಜಿಲ್ಲೆಗೆ ಆಗಮಿಸಿದ್ದರು. ಅಷ್ಟೇ ಅಲ್ಲ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರು ಎಲ್ಲರಿಗಿಂತ ಮೊದಲೇ ಸಂಚರಿಸಿ ಪ್ರಚಾರದಲ್ಲಿ ಮುಂದಿದ್ದರು. ಮೊದಲ ಬಾರಿಗೆ ರಾಯಚೂರು ನಗರ ಕ್ಷೇತ್ರದಲ್ಲಿ ಚಿತ್ರನಟಿಯೊಬ್ಬರು ಸ್ಪರ್ಧಿಸುವ ಮೂಲಕ ಕಣಕ್ಕೆ ತಾರಾ ಮೆರುಗು ಬಂದಿತ್ತು. ಹಾಗಾಗಿಯೇ ಭಾರೀ ಸಂಖ್ಯೆಯ ಜನರು ಅವರ ಪ್ರಚಾರ ಸಂದರ್ಭದಲ್ಲಿ ಉಪಸ್ಥಿತರಿರುತ್ತಿದ್ದರು. ಆದರೆ ಮತದಾನಕ್ಕೆ ಕೆಲವೇ ಕೆಲವು ದಿನಗಳ ಮೊದಲು ಕೆಲವು ಮುಖಂಡರು ಬಿಎಸ್ಆರ್ ಕಾಂಗ್ರೆಸ್ ಅನ್ನು ತೊರೆದ ಕಾರಣ ಪಕ್ಷ ಬಹಳ ಹಿನ್ನಡೆ ಅನುಭವಿಸಬೇಕಾಯಿತು. ಬುಧವಾರ ನಡೆದ ಮತಗಳ ಎಣಿಕೆ ವೇಳೆ ಪೂಜಾ ಅವರಿಗೆ ಕೇವಲ 1815 ಮತಗಳು ಬಂದಿದ್ದು, ಆ ಮೂಲಕ ಅವರ ಠೇವಣಿ ಜಪ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.