ತಾಲೂಕು ಸಾಹಿತ್ಯ ಸಮ್ಮೇಳನ, ಸಭೆ
ರಾಯಚೂರು: ಜೂನ್ ಎರಡನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇತ್ತೀಚೆಗೆ ನಗರದಲ್ಲಿ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಅಧ್ಯಕ್ಷರು, ಲೇಖಕರು, ಚಿಂತಕರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.
ನಗರದ ಎಸ್‌ಕೆಇ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸಭೆಯ ಅಧ್ಯಕ್ಷತೆ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ವಹಿಸಿದ್ದರು. ಸಭೆಯಲ್ಲಿ ಸಮ್ಮೇಳನದ ಸ್ವರೂಪ, ಅವಧಿ, ಗೋಷ್ಠಿಗಳು, ಸ್ವಾಗತ ಸಮಿತಿ ಅಧ್ಯಕ್ಷರ ಆಯ್ಕೆ, ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನವನ್ನು ನಗರದ ರಂಗಮಂದಿರದಲ್ಲಿ ಆಯೋಜಿಸಲು ಸಭೆ ನಿರ್ಧರಿಸಲಾಯಿತು. ಪ್ರಮುಖರಾದ ಭೀಮನಗೌಡ ಇಟಗಿ, ಡಾ. ಸುರೇಶ್ ಸಗರದ್, ರಾಘವೇಂದ್ರ ಕುಷ್ಟಗಿ ಮತ್ತಿತರರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯು ಕಾರ್ಯಕಾರಿ ಮಂಡಳಿ ಅಂತಿಮಗೊಳಿಸಲಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗಸೂಚಿಯಂತೆಯೇ ಅಧ್ಯಕ್ಷರ ಆಯ್ಕೆ ನಡೆಸಲಾಗುತ್ತದೆ ಎಂದು ಹೇಳಿ, ಸರ್ವಾಧ್ಯಕ್ಷರ ಆಯ್ಕೆಗೆ ಹಿರಿತನ, ಸಾಹಿತ್ಯ ಕೃಷಿ ಮತ್ತಿತರೆ ವಿಚಾರಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.ಬಾಬು ಭಂಡಾರಿಗಲ್, ಭಗತರಾಜ್ ನಿಜಾಮಕಾರ್, ಶರಣಪ್ಪ ಗೋನಾಳ, ಕರಿಯಪ್ಪ ಮಾಸ್ತರ್, ತಾಯರಾಜ್ ಮರ್ಚಟ್ಹಾಳ್, ಪ್ರೊ. ಸಿ.ಡಿ. ಪಾಟೀಲ್, ಎಚ್.ಎಚ್. ಮ್ಯಾದಾರ್, ಮುರಳೀಧರ್ ಕುಲಕರ್ಣಿ, ಅಯ್ಯಪ್ಪ ತುಕ್ಕಾಯಿ ಇದ್ದರು.