ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧರ್ಮಯುದ್ಧದಲ್ಲಿ ಕಾಂಗ್ರೆಸ್‌ಗೆ ಗೆಲವು: ನಾಯಕ ಅಭಿಮತ

Vishwanath S
Updated On : 10 May 2013, 12:28 pm

ದೇವದುರ್ಗ: ಧರ್ಮ, ಅಧರ್ಮದ ಯುದ್ಧದಲ್ಲಿ ಕ್ಷೇತ್ರದ ಮತದಾರರು ಧರ್ಮವನ್ನು ಬೆಂಬಲಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಮುಖಂಡ ಬಿ.ವಿ. ನಾಯಕ ತಿಳಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ದೊರೆತ ನಂತರ ಅವರು ಬುಧವಾರ ಮತದಾರರಿಗೆ ಅಭಿನಂದಿಸಿ, ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ದುರಾಡಳಿತದಿಂದ ಜನತೆಯ ನೆಮ್ಮದಿ ಹಾಳಾಗಿತ್ತು. ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಟೀಕಿಸಿದರು.
ತಾಲೂಕಿನ ಮತದಾರರು ಹಣಕ್ಕೆ ಮಾರಾಟ ಆದವರಲ್ಲ ಎಂಬುದು ಸದ್ಯದ ಚುನಾವಣೆಯಲ್ಲಿ ಸಾಬೀತಾಗಿದೆ. ಮತದಾರರು ತಮ್ಮ ತಂದೆ ವೆಂಕಟೇಶ ನಾಯಕರನ್ನು ಆಯ್ಕೆ ಮಾಡುವ ಮೂಲಕ ಸರಳ, ಸಜ್ಜನ ರಾಜಕಾರಣಿಯನ್ನು ಬೆಂಬಲಿಸಿದಂತಾಗಿದ್ದು ಕ್ಷೇತ್ರದ ಪ್ರಗತಿ ಮತ್ತು ಉತ್ತಮ ಆಡಳಿತ ವ್ಯವಸ್ಥೆ ಒದಗಿಸುವುದೇ ಅವರ ಗುರಿಯಾಗಿದೆ ಎಂದು ಹೇಳಿದರು.
ಭೇಟಿ: ಈ ವೇಳೆ ಗಬ್ಬೂರು, ಸುಂಕೇಶ್ವರಹಾಳ, ಮಸರಕಲ್, ಕಾಕರಗಲ್, ಚಿನ್ನಹೊನ್ನಕುಣಿ, ಕರಿಗುಡ್ಡ, ನವಿಲಗುಡ್ಡ, ಜಂಬಲದಿನ್ನಿ, ಜಾಲಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳ ಎಲ್ಲ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಬಿ.ವಿ.ನಾಯಕ ಅಭಿನಂದನೆ ಸಲ್ಲಿಸಿದರು.
ವಿಜಯೋತ್ಸವ: ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ನಾಯಕ ಅವರು ಗೆಲವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ಮಾನಪ್ಪ ಮೇಸ್ತ್ರಿ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ, ಮಹ್ಮದ ರಫೀ ಗೌರಂಪೇಟ, ಗುರು ವಿಶ್ವಕರ್ಮ, ಬಾಬಾ ಸೈಕಲ್, ಬಸವರಾಜ ಶೆಟ್ಟಿ ಸೇರಿ ನೂರಾರು ಯುವಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement