ವಲಸಿಗರನ್ನ ತವರಿಗಟ್ಟಿದ ಮತದಾರ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 9
ಜಿಲ್ಲೆಯಲ್ಲಿ ರಾಜಕೀಯ ಕೇಂದ್ರ ಬಿಂದು ಹಾಗೂ ರಾಜಕೀಯ ನಾಯಕರ ಕಾರ್ಖಾನೆ ಎಂದೆಲ್ಲಾ ಹೆಸರಾದ ಲಿಂಗಸ್ಗೂರು ಕ್ಷೇತ್ರ ವಿವಿಧ ರಾಜಕೀಯ ಪಕ್ಷಗಳಿಂದ ಬೇರೆ ಬೇರೆ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕ, ಸಚಿವ, ಸಂಸದರಾಗಿ ಹಾಗೂ ಕೇಂದ್ರ ಸಚಿವರನ್ನು ನೀಡಿದ ಹೆಮ್ಮೆಯ ಕ್ಷೇತ್ರವೆನಿಸಿಕೊಂಡಿದೆ.
ಲಿಂಗಸ್ಗೂರು ಕ್ಷೇತ್ರದ ರಾಜಕೀಯ ನಾಯಕರು ಅನ್ಯ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಆಯ್ಕೆಗೊಂಡ ಇತಿಹಾಸ ಮೆಲಕು ಹಾಕಿದರೆ, ತಾಲೂಕಿನ ಗೆಜ್ಜಲಗಟ್ಟಾ ಜಹಗೀರದಾರ ಮನೆತನದ ಬಸವರಾಜೇಶ್ವರಿ ಅವರು 1957, 1962 ಮತ್ತು 1967ರಲ್ಲಿ ಮಾನವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಅಲ್ಲದೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿದ್ದರು.
ಕೇಂದ್ರ ಸಚಿವಗಾಗಿ ಆಯ್ಕೆ: ಅದರಂತೆ ಆನ್ವರಿ ಗ್ರಾಮದ ಬಸವರಾಜ ಪಾಟೀಲ್ ಆನ್ವರಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಆಯ್ಕೆಗೊಂಡಿದ್ದರು. ನಂತರ ಮಾನವಿ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಇದೇ ಕ್ಷೇತ್ರದಿಂದ ಗುರುಗುಂಟಾ ಸಂಸ್ಥಾನದ ರಾಜಾ ಅಮರಪ್ಪ ನಾಯಕ 1983ರಲ್ಲಿ ಶಾಸಕರಾಗಿ ಆಯ್ಕೆಗೊಂಡಿದ್ದರು.
ಸರ್ಜಾಪುರ ಗ್ರಾಮದ ಎಂ.ಎಸ್.ಪಾಟೀಲರು ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಮತ್ತು ರಾಯಚೂರು ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಶಾಸಕರಾಗಿ ಆಯ್ಕೆಗೊಂಡಿದ್ದರು.
ರಾಯಚೂರು ಗ್ರಾಮೀಣ (ಅಂದಿನ ಕಲ್ಮಲಾ) ವಿಧಾನಸಭಾ ಕ್ಷೇತ್ರದಿಂದ ಗುಂತಗೋಳ ಸಂಸ್ಥಾನದ ರಾಜಾ ಅಮರೇಶ್ವರ ನಾಯಕರು 1999 ರಲ್ಲಿ ಸ್ಪರ್ಧಿಸಿ ಶಾಸಕ, ಸಚಿವರಾಗಿ ಆಯ್ಕೆಗೊಂಡಿದ್ದರು.
ಕ್ಷೇತ್ರ ಪುನರ್ ವಿಂಗಡಣೆಯಿಂದ 2008 ರಲ್ಲಿ ಲಿಂಗಸ್ಗೂರು ಕ್ಷೇತ್ರದಲ್ಲಿ ಸತತ ಮೂರು ಬಾರಿ ಜಯಭೇರಿ ಬಾರಿಸಿದ ಅಮರೇಗೌಡ ಪಾಟೀಲ್ ಬಯ್ಯಾಪುರ ಕುಷ್ಟಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು.
ಕಾರ್ಖಾನೆ ಎಂಬ ಇತಿಹಾಸ: ಅದರಂತೆ ಅದೇ 2008 ರಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಗುಂತಗೋಳ ಸಂಸ್ಥಾನದ ರಾಜಾ ರಾಯಪ್ಪ ನಾಯಕರು ಹಾಗೂ ಹುನಗುಂದ ಕ್ಷೇತ್ರದಿಂದ ಲೆಕ್ಕಿಹಾಳ ಗ್ರಾಮದ ದೊಡ್ಡನಗೌಡ ಲೆಕ್ಕಿಹಾಳ ಅವರು ಶಾಸಕರಾಗಿ ಆಯ್ಕೆಗೊಳ್ಳುವ ಮೂಲಕ ಲಿಂಗಸ್ಗೂರು ಕ್ಷೇತ್ರ ರಾಜಕೀಯ ನಾಯಕರನ್ನು ಹುಟ್ಟುಹಾಕುವ ಕಾರ್ಖಾನೆ ಎಂದು ಇತಿಹಾಸ ಸೃಷ್ಟಿಸಿದ್ದರು.
ಪ್ರಸ್ತುತ 2013ರ ವಿಧಾನಸಭೆ ಚುನಾವಣೆಯಲ್ಲಿ ಲಿಂಗಸ್ಗೂರು ಕ್ಷೇತ್ರದ ರಾಜಕೀಯ ನಾಯಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಪುರುದಪ್ಪ ವಕೀಲರು ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗಂಗಾವತಿ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸಹೋದರರಾದ ರಾಜಾ ರಾಯಪ್ಪ ನಾಯಕ, ರಾಜಾ ಅಮರೇಶ್ವರ ನಾಯಕರು ಸ್ಪರ್ಧಿಸಿದ್ದರು. ಅದೇರೀತಿ ಹುನಗುಂದ ಕ್ಷೇತ್ರದಿಂದ ದೊಡ್ಡನಗೌಡ ಪಾಟೀಲ್ ಲೆಕ್ಕಿಹಾಳ ಸೇರಿದಂತೆ 6 ಜನ ಸ್ಪರ್ಧಿಸಿದ್ದರು.
ಆದರೆ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಬೇರೆ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಲಿಂಗಸ್ಗೂರು ಕ್ಷೇತ್ರದ ರಾಜಕೀಯ ನಾಯಕರಿಗೆ ಮತದಾರರು ಕೈಹಿಡಿಯದ ಪರಿಣಾಮ ಇವರೆಲ್ಲರು ಸೋಲುಂಡು ತವರಿಗೆ ಮರಳಿದ್ದಾರೆ.