ಹಿರಿಯ ನಾಯಕರಿಂದಲೇ ನಂಬಿಕೆ ದ್ರೋಹ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 9
ಚುನಾವಣೆಗೆ ಸ್ಪರ್ಧಿಸುವಂತೆ ಮೊದಲು ಬೆಂಬಲಿಸಿದವರು ಕೊನೆಗೆ ಕೈಕೊಟ್ಟರು. ಹಿರಿಯ ರಾಜಕಾರಣಿ ಎಂ.ಎಸ್. ಪಾಟೀಲ್ ಅವರು ತಮ್ಮನ್ನು ಬೆಂಬಲಿಸುವ ಭರವಸೆ ಕೊಟ್ಟಿದ್ದರು. ಆದರೆ ಕಡೆಯ ಗಳಿಗೆಯಲ್ಲಿ ಅವರು ತಮ್ಮ ಜತೆಗೆ ಪ್ರಚಾರಕ್ಕೆ ಆಗಮಿಸಲಿಲ್ಲ ಎಂದು ನಗರ ಕ್ಷೇತ್ರದ ಕೆಜೆಪಿ ಪರಾಜಿತ ಅಭ್ಯರ್ಥಿ ಬಸವರಾಜ ಕಳಸ ಅಳಲು ತೋಡಿಕೊಂಡರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವೆಂದೂ ಚುನಾವಣೆಗೆ ಸ್ಪರ್ಧಿಸುವ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಜೆಡಿಎಸ್ನಲ್ಲಿ ಟಿಕೆಟ್ ದೊರೆಯುವುದು ಅನುಮಾನವಾಗುತ್ತಿದ್ದಂತೆಯೇ ಸದ್ಯ ಜೆಡಿಎಸ್ನಲ್ಲಿರುವ ಅನೇಕರು ತಮ್ಮನ್ನು ಪುಸಲಾಯಿಸಿ ಕೆಜೆಪಿ ಟಿಕೆಟ್ ಪಡೆಯುವಂತೆ ಪ್ರೇರೇಪಿಸಿದರು. ಆದರೆ ಆನಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಹಣ ಬಲಕ್ಕೆ ಶರಣಾದರು ಎಂದು ಟೀಕಿಸಿದರು.
ನಂಬಿಕೆಗೆ ದ್ರೋಹ: ತಾವು ನಂಬಿದ್ದ ಎಲ್ಲರೂ ತಮಗೆ ಕೊನೆಯ ಕ್ಷಣದಲ್ಲಿ ಕೈಬಿಡುವ ಮೂಲಕ ನಂಬಿಕೆಗೆ ದ್ರೋಹ ಬಗೆದರು. ಮಾಜಿ ಸಚಿವ ಎಂ.ಎಸ್. ಪಾಟೀಲ್ ಅವರು ಜೆಡಿಎಸ್ನಲ್ಲಿ ತಮಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಕೆಜೆಪಿಯಿಂದ ಸ್ಪರ್ಧಿಸಿದಲ್ಲಿ ಬೆಂಬಲಕ್ಕೆ ನಿಲ್ಲುವುದಾಗಿ ತಮಗೆ ಹೇಳಿದ್ದರು. ಆದರೆ ಅವರೂ ತಮ್ಮ ಜತೆ ಬರಲಿಲ್ಲ ಎಂದು ದೂರಿದರು.
ನಾಮಪತ್ರ ಸಲ್ಲಿಸುವ ವೇಳೆ ಅನೇಕರು ತಮಗೆ ಬೆಂಬಲಿಸಿದ್ದು, ಆನಂತರದಲ್ಲಿ ತಮ್ಮೊಂದಿಗೆ ಬರಲಿಲ್ಲ. ಆದರೆ ಆ ವೇಳೆಗಾಗಲೇ ಕಣದಲ್ಲಿದ್ದುದರಿಂದ ಏಕಾಂಗಿಯಾದರೂ ಸರಿಯೇ ಎಂದು ಚುನಾವಣೆ ಎದುರಿಸಿದ್ದಾಗಿ ತಿಳಿಸಿದ ಅವರು, ಕೆಜೆಪಿಯಲ್ಲೇ ಮುಂದುವರಿಯುವುದಾಗಿ ತಿಳಿಸಿ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳುವುದಾಗಿ ಕಳಸ ಹೇಳಿದರು.
ಏಕಾಂಗಿಯಾಗಲು ಪಾಟೀಲ್ ಕಾರಣ: ಮಾಜಿ ಸಚಿವ ಎಂ.ಎಸ್. ಪಾಟೀಲ್ ಅವರಿಗೆ ಜೆಡಿಎಸ್ನಲ್ಲಿ ಟಿಕೆಟ್ ನಿರಾಕರಿಸಿದಾಗ ಅವರ ಪರವಾಗಿ ತಾವು ಜೆಡಿಎಸ್ನಲ್ಲಿ ವಕಾಲತ್ತು ವಹಿಸಿದ್ದು, ತಾವು ಕೆಜೆಪಿ ಸೇರಲು ಪಾಟೀಲರೇ ಕಾರಣರು. ಆದರೆ ಅವರೇ ತಟಸ್ಥರಾಗುವ ಮೂಲಕ ತಮ್ಮನ್ನು ಏಕಾಂಗಿಯಾಗಿಸಿದರು ಎಂದು ಆರೋಪಿಸಿದರು. ನಗರ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಕೇವಲ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ನಗರ, ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಕುರಿತು ಚರ್ಚಿಸುತ್ತಾರೆ. ಆದರೆ ಮನೆಯಿಂದ ಹೊರಬಂದು ಮತದಾನ ಮಾಡುವ ಕಾರ್ಯ ಮಾಡುವುದಿಲ್ಲ. ಇಂಥವರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಕಳಸ ಟೀಕಿಸಿದರು.
ಮತದಾನಕ್ಕೆ ಹಿಂದೇಟೇಕೆ?: ನಗರದ ಸ್ಲಂ ಪ್ರದೇಶಗಳು, ಬಡವರು ವಾಸವಾಗಿರುವ ಕಾಲನಿಗಳಲ್ಲಿ ಮತದಾನದ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಏರಿಕೆ ಕಾಣುತ್ತಿದೆ. ಪ್ರತಿಷ್ಠಿತರು ವಾಸವಾಗಿರುವ ಪ್ರದೇಶದಲ್ಲಿ ಮತದಾನದ ಪ್ರಮಾಣ ಏರಿಕೆ ಕಾಣುತ್ತಿಲ್ಲ. ದೇಶದೆಡೆಗೆ ಕಾಳಜಿ ತೋರುವವರು ಸಂವಿಧಾನಬದ್ಧವಾಗಿ ನೀಡಿರುವ ಮತದಾನದ ಹಕ್ಕು ಚಲಾಯಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಶಿವಕುಮಾರ್ ಪೊಲೀಸ್ ಪಾಟೀಲ್, ರಂಗನಾಥ ರೆಡ್ಡಿ ಇದ್ದರು.