ಕಾಂಗ್ರೆಸ್ ಸೋಲಿಗೆ ಅಭ್ಯರ್ಥಿ ಅಹಂ ವರ್ತನೆ ಕಾರಣ
ರಾಯಚೂರು: ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರ ಸೋಲಿಗೆ ತಾವೂ ಸೇರಿದಂತೆ ಇನ್ನಿತರರು ಕಾರಣರಲ್ಲ. ಯಾಸೀನ್ ಅವರ ದುರಂಹಕಾರಿ ವರ್ತನೆ, ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗದಿರುವುದು ಹಾಗೂ ಸುಳ್ಳು ಹೇಳುವುದು ಸೋಲಿಗೆ ಕಾರಣವಾಯಿತು ಎಂದು ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಆರೋಪಿಸಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಹಾಗೂ ತಮ್ಮ ಬೆಂಬಲಿಗರ ವಿರುದ್ಧ ಸೋಲಿನ ಹತಾಶೆಯಿಂದ ಸೈಯದ್ ಯಾಸೀನ್ ವೃಥಾ ಆರೋಪ ಮಾಡಿದ್ದಾರೆ. ಅಂಥ ಆರೋಪಗಳು ಸತ್ಯಕ್ಕೆ ದೂರವಾದುದು. ಪಕ್ಷ ವಿರೋಧಿ ಚಟುವಟಿಕೆ ಎಂದು ಆಧಾರವಿಲ್ಲದೇ ಆರೋಪ ಮಾಡಿದ್ದಾರೆಂದು ಟೀಕಿಸಿದರು.
ಗ್ರಾಮೀಣ ಭಾಗ ನಿರ್ಲಕ್ಷ್ಯ: ರಾಯಚೂರು ನಗರ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಕಾರ್ಯ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಗ್ರಾಮೀಣ ಭಾಗದತ್ತ ತಿರುಗಿ ನೋಡಲಿಲ್ಲ. ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಅವರ ಸೋಲಿಗೆ ಪ್ರಮುಖ ಕಾರಣ. ತಾವು ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗೆಲವಿಗೆ ನಿರಂತರ ಪ್ರಚಾರ ನಡೆಸಿದ್ದಾಗಿ ತಿಳಿಸಿದ ಅವರು, ನಗರ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಿರಿಯ ಮುಖಂಡರಾದ ಪಾಪಾರೆಡ್ಡಿ, ಜಿಲ್ಲಾಧ್ಯಕ್ಷ ವಸಂತಕುಮಾರ್ ಮತ್ತಿತತರ ಬೆಂಬಲಿಗರಿರುವ ಕಾಲನಿಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಮತ ಗಳಿಸಿದ್ದಾರೆಂದು ದೂರಿದರು.
ಗ್ರಾಮೀಣ ಭಾಗದಲ್ಲಿ ತಾವು ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾಗಿ ಯಾಸೀನ್ ಆರೋಪಿಸಿರುವುದು ಸೋಲಿನ ಹತಾಶೆಯಿಂದಾಗಿಯೇ ವಿನಾ ಅವರಲ್ಲಿ ಯಾವುದೇ ಆಧಾರಗಳಿಲ್ಲ. ಅಷ್ಟೇ ಅಲ್ಲ ಪಕ್ಷದ ಆಂತರಿಕ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಪಕ್ಷದ ಸಿದ್ಧಾಂತದ ಉಲ್ಲಂಘನೆಯಾಗಿದೆ ಎಂದು ಟೀಕಿಸಿದ ಅವರು, ತಮ್ಮನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಹೇಳಿಕೆ ನೀಡುವ ಅಧಿಕಾರ ಮಾಜಿ ಶಾಸಕ ಯಾಸೀನ್ ಅವರಿಗಿಲ್ಲ ಎಂದು ತಿಳಿ ಹೇಳಿದರು.
ಸವಾಲು: ಕಾಂಗ್ರೆಸ್ ಅಭ್ಯರ್ಥಿ ಯಾಸೀನ್ ಅವರೊಂದಿಗೆ ಸದಾ ಇರುತ್ತಿದ್ದ ವಡವಾಟಿ, ಬಾಯಿದೊಡ್ಡಿ ಮತ್ತಿತರೆ ಗ್ರಾಮಗಳ ಅವರ ಆತ್ಮೀಯ ಬೆಂಬಲಿಗರ ಪ್ರದೇಶದ ಮತಗಟ್ಟೆಗಳಲ್ಲಿಯೂ ಕಾಂಗ್ರೆಸ್ಗೆ ಕಡಿಮೆ ಮತಗಳು ಬಂದಿವೆ. ಅವರೂ ಪಕ್ಷ ವಿರೋಧಿ ಕಾರ್ಯ ಮಾಡಿದ್ದಾರೆಂದು ಯಾಸೀನ್ ಘೋಷಿಸಲಿ ಎಂದು ಸವಾಲು ಹಾಕಿದರು.
ಚುನಾವಣೆ ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮಯಕ್ಕೆ ಸರಿಯಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳದಿರುವುದು, ಮತದಾರರನ್ನು ನಿರ್ಲಕ್ಷಿಸಿದ್ದೇ ಅವರ ಸೋಲಿಗೆ ಕಾರಣವೇ ವಿನಾ ಬೇರಾರೂ ಅಲ್ಲ. ದುರಂಹಕಾರದ ವರ್ತನೆಯಿಂದಲೇ ಅವರಿಗೆ ಸೋಲಾಗಿದೆ. ಅದರಲ್ಲೂ ಅವರ ವಿರುದ್ಧ ಅನೇಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು ಸಾವಿರಾರು ಮತಗಳನ್ನು ಕಳೆದುಕೊಳ್ಳಲು ದಾರಿ ಮಾಡಿತು ಎಂದು ಟೀಕಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ರಾಯಪ್ಪ ನಾಯಕ ಅವರ ಸೋಲಿಗೆ ಬಿಜೆಪಿ ಅಭ್ಯರ್ಥಿ ತಿಪ್ಪರಾಜ ಹಣ ಹಂಚಿಕೆ ಕಾರಣ. ಅದೇ ರೀತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಅನುದಾನ ದೊರೆಯದಂತೆ ಮಾಡಿದ್ದರಿಂದ ತೀವ್ರ ಹಿನ್ನಡೆಯಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ತಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ರಾಮಣ್ಣ, ಚಾಂದ್ ಪಾಷಾ, ನಾಗೇಂದ್ರಪ್ಪ, ಶ್ರೀನಿವಾಸ ನಾಯಕ, ತಿಮ್ಮಪ್ಪ,ಅನ್ವರ್ ಹುಸೇನ್ ಸೇರಿದಂತೆ ಅನೇಕರಿದ್ದರು.