ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ ಮಧ್ಯೆ ಶೈಕ್ಷಣಿಕ ಫಲಿತಾಂಶ ಕಾಣೆ

Vishwanath S
Updated On : 12 May 2013, 11:41 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 11
ಈ ವಾರ ಪ್ರಕಟವಾದ ಮೂರು ಫಲಿತಾಂಶಗಳಲ್ಲಿ ಚುನಾವಣೆ ಫಲಿತಾಂಶವೇ ಹೆಚ್ಚು ಪ್ರಚಾರ ಪಡೆಯಿತು. ಈ ಮಧ್ಯೆ ಕಳಪೆ ಸಾಧನೆ ಮಾಡಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶಗಳ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲೇ ಇಲ್ಲ. ಆದರೆ ಈಗ ಕಳಪೆ ಶೈಕ್ಷಣಿಕ ಸಾಧನೆ ಬಗ್ಗೆ ಆತ್ಮಾವಲೋಕನ ಮಾಡುವ ಹಾಗೂ ಚಿಂತನೆ ನಡೆಸುವ ಅಗತ್ಯ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ.
ಜಿಲ್ಲೆಯಲ್ಲಿ ಚುನಾವಣಾ ಅಬ್ಬರ ಎಷ್ಟಿತ್ತೆಂದರೆ ಕುಡಿವ ನೀರು, ವಿದ್ಯುತ್ ಸೇರಿದಂತೆ ಪ್ರಮುಖ ಸಮಸ್ಯೆಗಳು ಕಡು ಬೇಸಿಗೆಯಲ್ಲೂ ಸದ್ದೇ ಆಗಲಿಲ್ಲ. ಆದರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರೂ ಇರಲಿಲ್ಲ. ಅಧಿಕಾರಿಗಳಂತೂ ಮಾತೆತ್ತಿದರೆ ಚುನಾವಣಾ ಕರ್ತವ್ಯ ಎಂಬ ಸಿದ್ಧ ಉತ್ತರ ಹೇಳಿಯೇ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ಜನಸಾಮಾನ್ಯನ ಮಾತಿಗೆ ಮನ್ನಣೆಯೇ ದೊರೆಯಲಿಲ್ಲ. ಜನಪ್ರತಿನಿಧಿಗಳೂ ಈ ವಿಷಯದಲ್ಲಿ ಪ್ರಚಾರ ಮಾಡಿಕೊಂಡರೇ ಹೊರತು ಸಮಸ್ಯೆ ಬಗೆಹರಿಸಲು ಯತ್ನಿಸಲಿಲ್ಲ. ನನ್ನನ್ನು ಆಯ್ಕೆ ಮಾಡಿದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಅಭ್ಯರ್ಥಿಗಳು ಮತ ಕೇಳಿದರು. ಆದರೆ ಕುಡಿವ ನೀರಿನಂಥ ಗಂಭೀರ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ಅಲ್ಲದೇ ಸತತವಾಗಿ ಕಳಪೆ ಶೈಕ್ಷಣಿಕ ಫಲಿತಾಂಶ ಬಂದರೂ ಈ ಬಗ್ಗೆ ಯಾರೂ ಸೊಲ್ಲೆತ್ತದಿರುವುದು ದುದೈವದ ಸಂಗತಿಯಾಗಿದೆ.
ಕಳಪೆ ಶೈಕ್ಷಣಿಕ ಸಾಧನೆ: ಸದ್ಯ ಚುನಾವಣೆ ರಾಜಕೀಯಕ್ಕೆ ಫುಲ್ ಪಾಯಿಂಟ್ ಬಿದ್ದಿದೆ. ಆದರೆ ಜಿಲ್ಲೆಯ ಈ ಸಾಲಿನ ಶೈಕ್ಷಣಿಕ ಫಲಿತಾಂಶದ ಬಗ್ಗೆ ಯೋಚಿಸುವ ಕಾಲ ಕೂಡಿಬಂದಿದೆ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದು, ಅದರಲ್ಲಿ ಹೊಸ ಮಂತ್ರಿಗಳು ಜವಾಬ್ದಾರಿ ವಹಿಸಿಕೊಳ್ಳುವ ಸಮಯ ಸನಿಹದಲ್ಲಿದೆ. ಅಲ್ಲದೇ ಜಿಲ್ಲೆಯಿಂದ ಆಯ್ಕೆಯಾದವರಿಗೂ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ. ಜತೆಗೆ ಇಲ್ಲಿಯ ಶೈಕ್ಷಣಿಕ ಸಾಧನೆ ಬಗ್ಗೆಯೂ ಅವರು ಉತ್ತರದಾಯಿತ್ವರಾಗಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.78.47ರಷ್ಟಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಎನ್ನಬಹುದು. ಪಿಯುಸಿ ಫಲಿತಾಂಶ ಕೇಳಿದರೆ ನಾಚಿಕೆಯಾಗಬೇಕು. ಸತತ 5 ವರ್ಷಗಳಿಂದ ರಾಜ್ಯಮಟ್ಟದಲ್ಲಿ ಕೊನೆ ಸ್ಥಾನ ಪಡೆದು ಹಿಂದುಳಿದ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ. ಪಿಯುಸಿಯಲ್ಲಿ ಶೇ.46.02ರಷ್ಟು ಫಲಿತಾಂಶ ಬಂದಿದೆ.
ಯಾರು ಹೊಣೆ?: ಕಳಪೆ ಶೈಕ್ಷಣಿಕ ಸಾಧನೆಗೆ ಯಾರು ಹೊಣೆ ಎಂಬುದನ್ನು ಪತ್ತೆ ಮಾಡುವ ಅಗತ್ಯವಿದೆ. ಅಧಿಕಾರಿಗಳೋ, ಶಿಕ್ಷಕ ವರ್ಗವೋ ಅಥವಾ ನಮ್ಮನ್ನಾಳುವ ಸರ್ಕಾರಗಳ ನಿರ್ಲಕ್ಷ್ಯವೋ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇದಕ್ಕೆ ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಚಿಕ್ಕೋಡಿಯಂಥ ಹಿಂದುಳಿದ ಜಿಲ್ಲೆ ಸತತವಾಗಿ ಉತ್ತಮ ಸಾಧನೆ ಮಾಡುತ್ತಿರುವಾಗ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ.  ಆದರೆ ಇಲ್ಲಿಯ ಅಧಿಕಾರಿಗಳಿಗೆ ಇಂಥ ಪ್ರಶ್ನೆಗಳೇ ಎದುರಾಗುತ್ತಿಲ್ಲ. ಏನಾದರೂ ಕುಂಟು ನೆಪ ಹೇಳುತ್ತ, ಬಾಹ್ಯ ಅಭ್ಯರ್ಥಿಗಳಿಂದ ಫಲಿತಾಂಶ ಕಡಿಮೆಯಾಗಿದೆ ಎಂಬಂಥ ಬೇಜವಾಬ್ದಾರಿತನದ ಉತ್ತರ ಅಧಿಕಾರಿಗಳಿಂದ ಬರುತ್ತವೆ. ಜನಪ್ರತಿನಿಧಿಗಳೂ ಶೈಕ್ಷಣಿಕ ಪ್ರಗತಿ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸುಧಾರಣಾ ಕ್ರಮದ ಬಗ್ಗೆ ಚಿಂತಿಸುತ್ತಿಲ್ಲ. ಆದ್ದರಿಂದ ಈಗ ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ. ಯಾರೊಬ್ಬರನ್ನು ಹೊಣೆ ಮಾಡದೇ ಸಾಮೂಹಿಕ ಜಬಾವ್ದಾರಿ ವಹಿಸಿಕೊಂಡು ಶೈಕ್ಷಣಿಕ ವರ್ಷದ ಆರಂಭದಿಂದಲೇ ಫಲಿತಾಂಶ ಹೆಚ್ಚಳದ ಬಗ್ಗೆ ಗಮನ ನೀಡಬೇಕಿದೆ.
ಬೇಕಿದೆ ಇಚ್ಛಾಶಕ್ತಿ: ಹೈಕ ಭಾಗದ ಕಡೆಗಣನೆಯಿಂದ ಶೈಕ್ಷಣಿಕ ಸೌಲಭ್ಯಗಳಿಲ್ಲದೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವುದು ಒಪ್ಪುವ ಸಂಗತಿ. ಆದರೆ ಇದನ್ನೇ ಹೇಳಿಕೊಂಡು ಎಷ್ಟು ವರ್ಷ ಈ ಭಾಗದ ವಿದ್ಯಾರ್ಥಿಗಳನ್ನು ಉತ್ತಮ ಶಿಕ್ಷಣದಿಂದ ವಂಚಿಸುತ್ತಾರೋ ಗೊತ್ತಿಲ್ಲ. ರಾಜಕೀಯದವರ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇಪದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
 ಶಿಕ್ಷಕರ ಕೊರತೆಯೂ ಈ ಭಾಗವನ್ನು ಬಾಧಿಸುತ್ತಿದೆ. ಆದ್ದರಿಂದ ಹೊಸ ಸರ್ಕಾರ, ನೂತನ ಶಾಸಕರು, ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಸ್ಪಷ್ಟ ಯೋಜನೆ ತಯಾರಿಸಿ ಅನುಷ್ಠಾನಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಈ ವರ್ಷದಂತೆಯೇ ಮತ್ತೆ ಫಲಿತಾಂಶ ಮರುಕಳಿಸುವುದರಲ್ಲಿ ಅನುಮಾನವಿಲ್ಲ.

- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement