ಜನಸೇವೆಗೆ ಸಾಮಾನ್ಯ ಸೇವಕನಾಗಿ ಶ್ರಮಿಸುವೆ
ಲಿಂಗಸ್ಗೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಸೋಲು-ಗೆಲುವು ಸಾಮಾನ್ಯ ಪ್ರಕ್ರಿಯೆ. ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ಪರಾಜಿತಗೊಂಡರೂ ಕ್ಷೇತ್ರದ ಜನರ ಸೇವೆಗೆ ಸಾಮಾನ್ಯ ಸೇವಕನಾಗಿ ಕೆಲಸ ಮಾಡುವುದಾಗಿ ಕೆಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಎಚ್.ಬಿ. ಮುರಾರಿ ತಿಳಿಸಿದರು.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಶನಿವಾರ ಕೆಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಜಾತಿ, ವರ್ಗ, ಹಣ ಮುಂತಾದ ಆಮಿಷಗಳನ್ನು ಮೀರಿ ನನಗೆ ಹೆಚ್ಚಿನ ರೀತಿಯಲ್ಲಿ ಮತದಾರರು ಬೆಂಬಲಿಸಿದ್ದಾರೆ.
ಚುನಾವಣೆಯಲ್ಲಿ ಗೆಲುವಷ್ಟೆ ರಾಜಕೀಯವಲ್ಲ. ಸೋಲು ರಾಜಕೀಯದ ಅಡಿಪಾಯವಾಗಿದೆ. ಸೋಲುಂಡ ನಾನು ಎದೆಗುಂದದೆ ಮತದಾರರು ನೀಡಿದ ತೀರ್ಪಿಗೆ ಗೌರವಿಸುತ್ತೇನೆ ಎಂದರು.
ಕಾಮಗಾರಿಗಳು ಸ್ಥಗಿತ: ಕ್ಷೇತ್ರದಲ್ಲಿ ರಸ್ತೆ, ಕುಡಿವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇನ್ನು ನೀರಾವರಿ ವಿಷಯದಲ್ಲಿ ನಂದವಾಡಗಿ ಏತ ನೀರಾವರಿ ನೆನೆಗುದಿಗೆ ಬಿದ್ದಿದೆ ಮತ್ತು ವಿವಿಧ ಏತನೀರಾವರಿ ಕಾಮಗಾರಿಗಳು ಸ್ಥಗಿತಗೊಂಡಿವೆ.
ಜನತೆಗೆ ಮೂಲಭೂತ ಸೌಕರ್ಯ ದೊರಕಿಸಿ ಕೊಡುವಲ್ಲಿ ನನ್ನ ಹೋರಾಟ ನಿರಂತರ. ಮಾನವೀಯ ದೃಷ್ಟಿಯಿಂದ ಸಾಮಾಜಿಕವಾಗಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಅರಿತು ಕೆಲಸ ಮಾಡಲು ನಾನು ಸದಾಸಿದ್ಧರಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ ಅಂಗಡಿ, ಮುಖಂಡರಾದ ಹನುಮಂತ ತೊಗರಿ, ಅಮರಗುಂಡಪ್ಪ ನೆಲೋಗಿ, ಮಲ್ಲಯ್ಯ ನರಕಲದಿನ್ನಿ, ಶರಣಗೌಡ ಬಸಾಪೂರ, ಮಲ್ಲಪ್ಪ ನಿಂಗಪ್ಪ, ಶರಣಯ್ಯ ಗೊರೇಬಾಳ, ಗುಂಡಪ್ಪ ಜೀಡಿ, ಅಮರೇಶ ಕಲ್ಲೂರ ಸೇರಿದಂತೆ ಇದ್ದರು.