ಸ್ವಾಮೀಜಿಗಳಿಂದ ಹಿಂದೂ ಧರ್ಮಕ್ಕೆ ಅಪಮಾನ
ರಾಯಚೂರು: ಹಿಂದೂ ಧರ್ಮಕ್ಕೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಿರುವ ಕಾಳಿಮಠದ ಋಷಿಕುಮಾರ ಸ್ವಾಮೀಜಿ ಹಾಗೂ ಜ್ಯೋತಿಷಿ ನರೇಂದ್ರ ಶರ್ಮಾ ಅವರು ಕಾವಿ ಬಟ್ಟೆಗೆ ಮತ್ತು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ನಗರದಲ್ಲಿ ಶನಿವಾರ ಸಮಿತಿಯ ಜಿಲ್ಲಾ ಮುಖ್ಯಸ್ಥೆ ಕೃಷ್ಣವೇಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ವಾಹಿನಿಯ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಋಷಿ ಕುಮಾರಸ್ವಾಮೀಜಿ ಕಾವಿ ಬಟ್ಟೆ ಧರಿಸಿ ಪಾಲ್ಗೊಂಡು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂದು ಟೀಕಿಸಿದರು.
ಬಿಗ್ಬಾಸ್ ಕಾರ್ಯಕ್ರಮದಲ್ಲಿ ಅವರು ಅರೆಬರೆ ಬಟ್ಟೆ ಧರಿಸಿದ ಯುವತಿಯರೊಂದಿಗೆ ಅಶ್ಲೀಲವಾಗಿ ನರ್ತಿಸುವ ಮೂಲಕ ಸಂಪೂರ್ಣ ಕಾವಿ ಪರಂಪರೆಗೆ ಮಸಿ ಬಳಿಯುವ ಕಾರ್ಯ ಮಾಡಿದ್ದಾರೆ. ಜ್ಞಾನ, ವೈರಾಗ್ಯದ ಪ್ರತೀಕವಾದ ಕಾವಿ ಬಟ್ಟೆಗೆ ಅಪಚಾರ ಎಸಗಿದ್ದಾನೆಂದು ದೂರಿದರು.
ಹಣ ಗಳಿಕೆ ಉದ್ದೇಶ: ಕಾಳಿ ಸ್ವಾಮಿ ಹಾಗೂ ನರೇಂದ್ರ ಶರ್ಮಾ ಜೋತಿಷಿ ಹಣ ಗಳಿಕೆಗೆ ಯಾವುದೇ ಅವತಾರ ಧರಿಸಲು ಹಿಂದೇಟು ಹಾಕುವುದಿಲ್ಲ ಎಂಬುದು ಸಾಬೀತಾಗಿದೆ. ಇಂಥವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಮೂಲಕ ಖಾಸಗಿ ವಾಹಿನಿಯು ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿದರು.
ಬಿಗ್ ಬಾಸ್ ಕಾರ್ಯಕ್ರಮವು ಹಿಂದೂಗಳು ಮತ್ತು ಹಿಂದೂ ಧರ್ಮವನ್ನು ಅಪಮಾನಿಸುವ ಷಡ್ಯಂತ್ರವಾಗಿದೆ. ಟಿವಿ ಮಾಧ್ಯಮದ ಮೂಲಕ ಹಿಂದೂ ಧರ್ಮವನ್ನು ಅಪಮಾನಿಸುವ ಟಿವಿ ಚಾನೆಲ್ಗಳನ್ನು ಜನತೆ ವೀಕ್ಷಿಸಬಾರದು.
ಕೇವಲ ಹಿಂದೂ ಮಠಗಳ ಧಾರ್ಮಿಕ ಮುಖಂಡರನ್ನು ಕರೆಯಿಸಿ ಬಿಗ್ ಬಾಸ್ನಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸುವ ಖಾಸಗಿ ವಾಹಿನಿಯವರು ಇನ್ನಿತರ ಸಮಾಜದವರನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಏಕೆ ಆಹ್ವಾನಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಯಶ್ರೀ ಮಸ್ಕಿ, ವಿಜಯಲಕ್ಷ್ಮಿ ಮತ್ತಿತರರು ಇದ್ದರು.