ಶ್ರೀಮಠಕ್ಕೆ ಉದ್ಯಮಿ ರಂಗನಗೌಡರ ಕೊಡುಗೆ
ಪ್ರವಾಹದಿಂದ ತತ್ತರಿಸಿ ಬಡವಾಗಿದ್ದ ಶ್ರೀಕ್ಷೇತ್ರ ಮಂತ್ರಾಲಯ ಅಭಿವೃದ್ಧಿಯಲ್ಲಿ ಸರಿ ಸುಮಾರು 20ವರ್ಷಗಳಷ್ಟು ಹಿಂದೆ ಸರಿದಿತ್ತು.
ಕ.ಪ್ರ.ವಾರ್ತೆ ರಾಯಚೂರು ಮೇ 13
ಪ್ರವಾಹದಿಂದ ತತ್ತರಿಸಿ ಬಡವಾಗಿದ್ದ ಶ್ರೀಕ್ಷೇತ್ರ ಮಂತ್ರಾಲಯ ಅಭಿವೃದ್ಧಿಯಲ್ಲಿ ಸರಿ ಸುಮಾರು 20ವರ್ಷಗಳಷ್ಟು ಹಿಂದೆ ಸರಿದಿತ್ತು. ಮತ್ತೆ ಮಂತ್ರಾಲಯಕ್ಕೆ ಭೌತಿಕ ಶ್ರೀಮಂತಿಕೆ ತಂದುಕೊಡುವುದು ಶ್ರೀಮಠದ ಆಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಆದರೆ, ರಾಯರ ಪರಮಭಕ್ತರಿಗೆ ರಾಯರ ಪ್ರೇರಣೆಯಾಗಿದ್ದೇ ತಡ ಅನೇಕ ದಾನಿಗಳು ಮಂತ್ರಾಲಯ ಪುನಃ ಕಟ್ಟಿ ಕೊಡಲು ಸಜ್ಜಾದರು. ಅಂಥವರಲ್ಲಿ ಹೊಸಪೇಟೆಯ ಗಣಿ ಉದ್ಯಮಿ ರಂಗನಗೌಡರೂ ಒಬ್ಬರು.
ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಚ್.ಜಿ. ರಾಮುಲು ಮೊದಲಿನಿಂದಲೂ ರಾಯರ ಪರಮಭಕ್ತರು. ಅವರಂತೆ ಹೊಸಪೇಟೆಯ ಉದ್ಯಮಿ ಹಾಗೂ ಎಚ್.ಜಿ. ರಾಮುಲು ಅವರ ಸಹೋದರ ರಂಗನಗೌಡರೂ ಮಂತ್ರಾಲಯ ಮಠದ ಪರಮಾಪ್ತರು ಹಾಗೂ ರಾಯರ ಭಕ್ತರೂ ಹೌದು. ಹಾಗಾಗಿ, ಮಂತ್ರಾಲಯದಲ್ಲಿ ನಡೆಯುವ ಬೃಹತ್ ಮಟ್ಟದ ಕಾಮಗಾರಿಗಳಿಗೆ ರಂಗನಗೌಡರ ಕೊಡುಗೆ ಇದ್ದೇ ಇರುತ್ತದೆ.
2009ರ ಪ್ರವಾಹದಲ್ಲಿ ಶ್ರೀಮಠಕ್ಕಾದ ಹಾನಿ ಅಷ್ಟಿಷ್ಟಲ್ಲ. ಅಂದು ತುಂಗಭದ್ರಾ ನದಿ ಉಕ್ಕಿ ಹರಿದಿದ್ದರಿಂದ ಕೋಟ್ಯಂತರ ಮೌಲ್ಯದ ಆಸ್ತಿ ನೀರು ಪಾಲಾಗಿದ್ದು ಇತಿಹಾಸ. ಬೃಹತ್ ಕಟ್ಟಡಗಳು, ವಸತಿ ಸಮುಚ್ಛಯಗಳಿಗೆ ಆದ ಹಾನಿ ಸರಿದೂಗಲು ಎರಡು ವರ್ಷಗಳೇ ಕಳೆದವು. ಹೀಗೆ ಒಂದೊಂದಾಗಿ ಆರಂಭಗೊಂಡ ಅಭಿವೃದ್ಧಿ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಇಂಥ ಅಭಿವೃದ್ಧಿ ಕಾರ್ಯಗಳ ಸಾಲಿನಲ್ಲಿ 2010ರಂದು ಆರಂಭಗೊಂಡಿದ್ದೇ ಶ್ರೀರಾಘವೇಂದ್ರಸ್ವಾಮಿಗಳ ಮಠದ ಮಹಾದ್ವಾರ. ಶ್ರೀಮಠಕ್ಕೆ ಕಳಸಪ್ರಾಯದಂತಿರುವ ಶ್ರೀಮಠದ ಮಹಾದ್ವಾರ ಮಂತ್ರಾಲಯದ ಶ್ರೀಮಂತಿಕೆಯ ದ್ಯೋತಕವಾಗಿ ತಲೆ ಎತ್ತಿ ನಿಂತಿದೆ.
ಬೃಹತ್ ಮಹಾದ್ವಾರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಶ್ರೀಮಠದ ತಾಂತ್ರಿಕ ವಿಭಾಗದ ಸಿಬ್ಬಂದಿ. ಆದರೂ ಅದಕ್ಕೆ ಆರ್ಥಿಕ ನೆರವು ನೀಡಿದ್ದು, ಹೊಸಪೇಟೆಯ ಉದ್ಯಮಿ ರಂಗನಗೌಡ ಮತ್ತವರ ಮಗ ಗವಿಯಪ್ಪ ಎಂಬುದು ಸುಳ್ಳಲ್ಲ. ಸುಮಾರು 5.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಾದ್ವಾರಕ್ಕೆ ಕರ್ನಾಟಕ ಮತ್ತು ತಮಿಳುನಾಡಿನ ಅನೇಕ ಕಲಾವಿದರು ಶ್ರಮಿಸಿದ್ದಾರೆ. 2010ರಿಂದ ಇಲ್ಲಿವರೆಗೆ ನಡೆದ ನಿರಂತರ ನಿರ್ಮಾಣದ ಫಲವಾಗಿ 300 ಅಡಿ ಉದ್ದದ ಹಾಗೂ 30 ಅಡಿ ಎತ್ತರದ ಮಹಾದ್ವಾರ ಉದ್ಘಾಟನೆಗೆ ಸಜ್ಜಾಗಿದೆ. ಕಾಂಕ್ರೀಟ್ನ ಬೃಹತ್ ಕಂಬಗಳಿಗೆ ಗ್ರಾನೈಟ್ ಶಿಲೆಯ ಹೊದಿಕೆ ಹೊದಿಸಿದ್ದು, ತಮಿಳುನಾಡಿನ ಶಿಲ್ಪಿಗಳು ಮಹಾದ್ವಾರದ ಮೇಲ್ಭಾಗದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಮಾದರಿಯಲ್ಲಿಯೇ ಬೃಂದಾವನವನ್ನು ನಿರ್ಮಿಸಿದ್ದಾರೆ.
ಮಹಾದ್ವಾರಕ್ಕೆ ಬೃಹದಾಕಾರದ ನಾಲ್ಕು ಕಂಬಗಳಿದ್ದು, ಅವುಗಳ ಎರಡೂ ಪಕ್ಕಕ್ಕೆ ಸುಮಾರು 18ಕ್ಕೂ ಹೆಚ್ಚಿನ ಕಂಬಗಳಿರುವ ವಿಶಾಲ ಮಂಟಪ ನಿರ್ಮಿಸಲಾಗಿದೆ. ಮಠದ ಮಹಾದ್ವಾರದ ನಿರ್ಮಾಣಕ್ಕೆ ಎರಡು ವರ್ಷಗಳೇ ಹಿಡಿದಿದ್ದು, ಮೇ 14, 15 ಮತ್ತು 16ರಂದು ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ, ಮಹಾದ್ವಾರ ನಿರ್ಮಾಣಕ್ಕೆ ರಂಗನಗೌಡರು ನೀಡಿದ ಕೊಡುಗೆ ಯಾವತ್ತಿಗೂ ಸ್ಮರಣೀಯ. ಶ್ರೀಮಠದ ಭೌತಿಕ ಪ್ರಗತಿಯಲ್ಲಿ ರಂಗನಗೌಡರ ಕೊಡುಗೆಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆಯ ಉದ್ಯಮಿ ರಂಗನಗೌಡರ ಕೊಡುಗೆಯ ಫಲವಾಗಿ ಮಹಾದ್ವಾರ ಬೃಹದಾಕಾರದಲ್ಲಿ ತಲೆ ಎತ್ತಿ ನಿಂತಿದೆ. ಈ ಹಿಂದೆಯೂ ಅವರು ಶ್ರೀಮಠಕ್ಕೆ ಹತ್ತಾರು ರೀತಿಯಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಶ್ರೀಮಠದ ಭೌತಿಕ ಶ್ರೀಮಂತಿಕೆಗೆ ತಮ್ಮದೇ ಆದ ರೀತಿಯಲ್ಲಿ ದಾನಿಯಾಗಿದ್ದಾರೆ. ಸದ್ಯ ಬೃಹತ್ ಮಹಾದ್ವಾರವನ್ನೂ ನಿರ್ಮಿಸಿಕೊಡುವ ಮೂಲಕ ಶ್ರೀಮಠಕ್ಕೆ ಆಗಮಿಸುವ ಎಲ್ಲರ ಮೆಚ್ಚುಗೆ ಜತೆಗೆ ಶ್ರೀರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಅನಾದಿ ಕಾಲದಿಂದಲೂ ನಮ್ಮ ಕುಟುಂಬದ ಮೇಲೆ ಶ್ರೀರಾಯರ ಆಶೀರ್ವಾದವಿದೆ. ಅಂತೆಯೇ ನಾವು ಸಹ ಶ್ರೀಮಠಕ್ಕೆ ನಡೆದುಕೊಂಡು ಬಂದಿದ್ದೇವೆ. ಪ್ರವಾಹ ಸಂದರ್ಭದಲ್ಲಿ ಹಾನಿಯಾದಾಗ ಮನಸ್ಸಿಗೆ ತುಂಬಾ ನೋವಾಗಿತ್ತು. ಮಠದ ಗತ ವೈಭವ ಮರುಕಳಿಸಬೇಕೆಂದು ಬಯಸಿದವರಲ್ಲಿ ನಾನು ಅದರಲ್ಲೂ ಮುಖ್ಯವಾಗಿ ನನ್ನ ತಂದೆ ರಂಗನಗೌಡರು ಪ್ರಮುಖರು. ಮಹಾದ್ವಾರ ನಿರ್ಮಾಣಕ್ಕಾಗಿ ನಾವು ಅಳಿಲು ಸೇವೆ ಮಾಡಿದ್ದೇವೆ. ಈ ಕಾರ್ಯ ತಮಗೆ ತೃಪ್ತಿ ತಂದಿದೆ.
- ಎಚ್.ಆರ್. ಗವಿಯಪ್ಪ, ರಂಗನಗೌಡರ ಮಗ