2 ದಿನದಲ್ಲಿ ಕುಡಿವ ನೀರು ಸರಬರಾಜು
ಕ.ಪ್ರ. ವಾರ್ತೆ, ಮುದಗಲ್, ಮೇ 14
ತಾಲೂಕಿಗೆ ಸಮೀಪದ ರಾಮತ್ನಾಳ, ಬ್ಯಾಲಿಹಾಳ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಹೆಚ್ಚಿರುವ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ, ಎಚ್.ಬಿ. ಮುರಾರಿ ಅವಳಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಯಶಸ್ವಿಯಾದರು.
ಗ್ರಾಮಸ್ಥರೊಂದಿಗೆ ಚರ್ಚಿಸಿದ ಅವರು ಎರಡು ಗ್ರಾಮಕ್ಕೆ ಶಾಸ್ವತ ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾ ಪಂಚಾಯಿತಿಯಿಂದ 30 ಲಕ್ಷ ಮಂಜೂರು ಮಾಡಿ ಕಾಮಗಾರಿಯನ್ನು ಗುತ್ತಿಗೆ ನೀಡಿದ್ದು ಗುತ್ತಿಗೆದಾರರು ಈಗಾಗಲೇ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪಕ್ಕದ ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ ಎರಡು ಬೋರವೆಲ್ ಕೊರೆಸಲಾಗಿದ್ದು ಗ್ರಾಮಗಳಲ್ಲಿ ನೀರು ಸಂಗ್ರಹ ತೊಟ್ಟಿ ಕಾಮಗಾರಿ ಮಾತ್ರ ಬಾಕಿ ಉಳಿದಿದೆ.
ಇನ್ನೆರಡು ದಿನದಲ್ಲಿ ನೀರು ಸರಬರಾಜು: ಆದ್ದರಿಂದ ಬೇಸಿಗೆ ದಿನಗಳಾಗಿದ್ದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ನೀರು ಸಂಗ್ರಹಣ ತೊಟ್ಟಿ ನಿರ್ಮಾಣವಾಗುವವರೆಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವಂತೆ ಜಿಲ್ಲಾ ಪಂಚಾ ಯಿತಿ ಅಧಿಕಾ ರಿಗಳಿಗೆ, ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಬೋರ್‌ವೆಲ್‌ಗೆ ಇನ್ನೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಸರಬರಾಜು ಮಾಡುವಂತೆ ಸೂಚಿಸಲಾಗಿದೆ ಎಂದರು.
ಬ್ಯಾಲಿಹಾಳ ಹಾಗೂ ರಾಮತ್ನಾಳ ಗ್ರಾಮಸ್ಥರು ಹಿರೇಹಳ್ಳದ ನೀರನ್ನು ಸೇವಿಸುತ್ತಿದ್ದು, ಹಳ್ಳ ಬತ್ತಿದ್ದರಿಂದ ಕುಡಿಯಲು ಯೋಗ್ಯವಿಲ್ಲದ ಬೋರ್‌ವೆಲ್ ನೀರು ಕುಡಿದು ತೊಂದರೆ ಪಡುತ್ತಿದ್ದರು. ಚುನಾವಣೆ ಸಮಯದಲ್ಲಿ ಗ್ರಾಮಕ್ಕೆ ಹೋದಾಗ ಜನರು ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದರಿಂದ ಗ್ರಾಮಕ್ಕೆ ಭೇಟಿ ನೀಡಬೇಕಾಯಿತು ಎಂದರು. ಜನಪ್ರತಿನಿಧಿಗಳಾದವರು ಗ್ರಾಮೀಣ ಪ್ರದೇಶದ ಮೂಲ ಸೌಲಭ್ಯಗಳ ಬಗ್ಗೆ ಸ್ಪಂದನೆ ಮಾಡುವುದು ಅವರ ಕರ್ತವ್ಯ ಎಂದರು. ಮುಖಂಡರಾದ ಶಶಿಧರಗೌಡ ಬನ್ನಿಗೋಳ, ಕೇಶವರಡ್ಡಿ, ಅಮರೇಗೌಡ ಬ್ಯಾಲಿಹಾಳ ಮುಂತಾದವರು ಉಪಸ್ಥಿತರಿದ್ದರು.
--
ಮಟಕಾ: ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಹಟ್ಟಿ ಕ್ಯಾಂಪಿನ ಗಾಂಧಿ ಮೈದಾನದಲ್ಲಿ ಮಟಕಾ ಬರೆಯುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಗ್ರಾಮದ ಗಂಗಾಧರ, ರಫೀ ಎಂದು ಗುರುತಿಸಲಾಗಿದೆ. ಇವರು ಗ್ರಾಮದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 710 ನಗದು ಜಪ್ತಿ ಮಾಡಿದ್ದಾರೆ.ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇಬ್ಬರ ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗ್ರಾಮದ ತಾಜುದ್ದೀನ್, ಶಂಕರಗೌಡ ಎಂದು ಗುರುತಿಸಲಾಗಿದೆ. ಈ ಇಬ್ಬರು ಗ್ರಾಮದ ಸಂತೆಬಜಾರ್‌ನ ಬಳಿಯ ವುಡ್‌ಲ್ಯಾಂಡ್ ಬಾರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ನಗದು 725 ಜಪ್ತಿ ಮಾಡಲಾಗಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.