ಉದ್ವಿಗ್ನದತ್ತ ದನಕಳ್ಳನ ಮೇಲಿನ ಸೇಡು
ಕ.ಪ್ರ. ವಾರ್ತೆ, ಸಿಂಧನೂರು, ಮೇ 14
ತಾಲೂಕಿನ ಆರ್.ಎಚ್. 1ನೇ ಕ್ಯಾಂಪಿನಲ್ಲಿ ದನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೋದ ಉದ್ರಿಕ್ತ ಗುಂಪು ಪೊಲೀಸ್ ವಾಹನವನ್ನೇ ಜಖಂಗೊಳಿಸಿ, ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ, ಪಿಎಸ್‌ಐ ಸೇರಿದಂತೆ ಪೇದೆಗಳಿಗೆ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ಬಂಗಾಲಿ ಕ್ಯಾಂಪಿನ ಆರೋಗ್ಯಸ್ವಾಮಿ ಎಂಬಾತ ಸ್ಥಳೀಯವಾಗಿ ದನಗಳನ್ನು ಹಿಡಿದು ಮಾರುತ್ತಿದ್ದ. ಒಂದು ವೇಳೆ ಈ ಕೃತ್ಯ ಗೊತ್ತಾಗಿ ದನಗಳ ವಾರಸುದಾರರು ಕೇಳಿದರೆ ತನ್ನ ಹೊಲಕ್ಕೆ ನುಗ್ಗಿ ಬೆಳೆ ಹಾಳು ಮಾಡಿದ್ದವು ಎಂದು ವಾದಿಸುತ್ತಿದ್ದ. ಈ ಪ್ರವೃತ್ತಿ ಕಳೆದೊಂದು ವರ್ಷದಿಂದ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ರೋಸಿ ಹೋದ ಜನತೆ: ಇದರಿಂದ ರೋಸಿ ಹೋಗಿದ್ದ ಅಲ್ಲಿನ ನಿವಾಸಿಗಳು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಕಳೆದ ವರ್ಷ ಇಂತಹ ಕಳ್ಳತನದ ಘಟನೆ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲಾ ಒಗ್ಗಟ್ಟಿನಿಂದ ಪ್ರತಿರೋಧಿಸಿದ್ದರಿಂದ ಆತ ಊರನ್ನೇ ಬಿಟ್ಟು ಹೋಗಿದ್ದ. ಇತ್ತೀಚೆಗೆ ಪುನಃ ಗ್ರಾಮಕ್ಕೆ ಬಂದು ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದ ಎಂಬುದು ಸ್ಥಳೀಯರ ಒಕ್ಕೊರಲಿನ ಆರೋಪ.
ಮಂಗಳವಾರವೂ ಈತ ತನ್ನ ಹೊಲಕ್ಕೆ ದನಗಳು ನುಗ್ಗಿವೆ ಎಂದು ಅವುಗಳನ್ನು ಹೊಡೆದು ಓಡಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಆರ್.ಎಚ್. ಕ್ಯಾಂಪ್ ನಂ.1(ಬಂಗಾಲಿ ಕ್ಯಾಂಪ್)ನ ಜನತೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನನ್ನು ಸಿನಿಮೀಯ ರೀತಿಯಲ್ಲಿ ಎಲ್ಲರೂ ಕೈಯಲ್ಲಿ ಕಲ್ಲು, ಬಡಿಗೆ ಹಿಡಿದು ಅಟ್ಟಿಸಿಕೊಂಡು ಬೆನ್ನಟ್ಟಿದ್ದಾರೆ. ಆತ ಪ್ರಾಣ ಭಯದಿಂದ ಒಂದು ಕಿಮೀ ದೂರ ಓಡಿ ಹೋದರೂ ಉದ್ರಿಕ್ತ ಜನತೆ ಬಿಡಲಿಲ್ಲ ಎಂದು ತಿಳಿದು ಬಂದಿದೆ.
ಮನೆ ಮೇಲೆ ಕಲ್ಲು: ಕೊನೆಗೆ ಈರಣ್ಣ ಕ್ಯಾಂಪಿನ ಹನುಮಂತಪ್ಪ ತುರ್ವಿಹಾಳ ಎಂಬವರ ಮನೆಯಲ್ಲಿ ತನ್ನ ಪುತ್ರ ಪೀಟರ್‌ನೊಂದಿಗೆ ಅಡಗಿ ಕುಳಿತಿದ್ದಾನೆ. ಆ ಮನೆಗೆ ಬೀಗ ಹಾಕಿ ವೃದ್ಧೆಯೊಬ್ಬಳು ಹೊರಗೆ ಕುಳಿತಿದ್ದರಿಂದ ಮನೆಯೊಳಗೆ ನುಗ್ಗಲಾಗದೆ ಹಂಚಿನ ಮನೆಗೆ ಕಲ್ಲು ತೂರಿದ್ದಾರೆ. ಇದರಿಂದ ಗೃಹೋಪಯೋಗಿ ವಸ್ತುಗಳು, ಟಿವಿ, ಫ್ರಿಜ್ ಹಾನಿಗೊಳಗಾಗಿವೆ.
ಪೊಲೀಸ್ ಜೀಪ್ ಜಖಂ: ತಮ್ಮ ಮನೆಯ ಮೇಲೆ ಕಲ್ಲು ಬೀಳುತ್ತಿರುವುದಕ್ಕೆ ಗಾಬರಿಗೊಂಡ ಮನೆಯ ಮಾಲೀಕ ಹನುಮಂತಪ್ಪ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಅಪರಾಧ ವಿಭಾಗದ ಪಿಎಸ್‌ಐ ಸುಶಿಲ್ ಕುಮಾರ್, ಪೇದೆಗಳಾದ ಶೇಟಪ್ಪ, ಮಲ್ಲಪ್ಪ, ರಾಮಾನುಜ ಧಾವಿಸಿದ್ದಾರೆ. ಆಗ ಉದ್ರಿಕ್ತ ಗುಂಪು ಪಿಎಸ್‌ಐ ಸೇರಿದಂತೆ ಪೇದೆಗಳ ಮೇಲೂ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನ ಜಖಂಗೊಳಿಸಿದೆ.
ಇನ್ನೊಂದು ಗುಂಪು ಆರೋಗ್ಯಸ್ವಾಮಿಯ ಹೊಲಕ್ಕೆ ತೆರಳಿ ಆತನ ಟ್ರ್ಯಾಕ್ಟರ್ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದೆ. ಪಿಎಸ್‌ಐ ಲಿಂಗಪ್ಪ ಬಂಗಾಲಿಕ್ಯಾಂಪಿನ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಎಸ್.ಬಿ. ಬಿಸ್ನಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಘಟನೆ ಕುರಿತಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.