'ವಚನಗಳಿಂದ ಮಾನವ ಬದಲಾವಣೆ ಸಾಧ್ಯ'
ಕ.ಪ್ರ. ವಾರ್ತೆ, ಸಿಂಧನೂರು, ಮೇ 14
ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಅನೈತಿಕತೆಯ ಹಾದಿ ಹಿಡಿದಿದ್ದು ತನ್ನ ಸ್ವಾರ್ಥ ಸಾಧನೆಗೆ ಏನನ್ನಾದರೂ ಮಾಡಬಲ್ಲ. ಆತನಲ್ಲಿ ಮಾನವೀಯ ಮೌಲ್ಯಗಳು ಕಳೆದುಹೋಗಿದ್ದು ವಚನಗಳಿಂದ ಮಾತ್ರ ಮನುಷ್ಯನ ಆಂತರಿಕ ಸುಧಾರಣೆ ಸಾಧ್ಯವಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ಡಾ.ಬಸವರಾಜ ಸಬರದ ಅಭಿಪ್ರಾಯಪಟ್ಟರು.
ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ಹಾದಿಯಲ್ಲಿ ಪ್ರತಿಯೊಬ್ಬರು ಮುಂದುವರಿದಾಗ ನಮ್ಮ ವೃತ್ತಿಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಬಹುದು. ಜಾತಿ- ಮತ- ಪಂಥಗಳಿಂದ ಮೂಢ ನಂಬಿಕೆಗಳಿಂದ ದೂರವಿದ್ದು ಪ್ರತಿಯೊಬ್ಬರು ಆಧ್ಯಾತ್ಮದೆಡೆಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಪ್ರವಚನಕಾರ ಮಲ್ಲಿಕಾರ್ಜುನಸ್ವಾಮಿ ಅಥಣಿ, ಬಿಇಒ ವೃಷಭೇಂದ್ರಯ್ಯಸ್ವಾಮಿ, ಎಇಇ ಬಿ.ಎಸ್. ಗೌಡೂರು, ಸಮಾಜ ಕಲ್ಯಾಣಾಧಿಕಾರಿ ನಾಗರಾಜ, ನಗರಸಭೆ ಪೌರಾಯುಕ್ತ ನಾಸೀರ್ ಅಲಿ, ನಯೋಪ್ರಾ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪ್ರಭುರಾಜ, ವೀರಶೈವ ಸಮಾಜದ ಅಧ್ಯಕ್ಷ ಅಶೋಕ ಗದ್ರಟಗಿ, ಶರಣೇಗೌಡ ಗಿಣಿವಾರ, ಗುಂಡಪ್ಪ ಬಳಿಗಾರ, ವೀರಭದ್ರಪ್ಪ ಕುರುಕುಂದಿ, ಶೇಖರ ಯರದಿಹಾಳ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದ್ರಾವಿಡ ಭಾಷಾ ಹರವು: ಉಪನ್ಯಾಸ ಯಶಸ್ವಿ
ರಾಯಚೂರು: ನಗರದ ವಿ.ಎಸ್.ಕಾಂತನವರ್ ಪ್ರತಿಷ್ಠಾನದಿಂದ ನಿರಂತರ ಉಪನ್ಯಾಸ ಮಾಲಿಕೆಯ ಅಂಗವಾಗಿ ದ್ರಾವಿಡ ಭಾಷೆಯ ಹರವು ಮತ್ತು ಆಳ ಎಂಬ ವಿಷಯದ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಎಂ.ಶಶಿಧರ್ ದ್ರಾವಿಡ ಭಾಷೆಯ ಹರವು ಮತ್ತು ಆಳದ ಕುರಿತು ಮಾತನಾಡಿ, ದ್ರಾವಿಡ ಭಾಷೆಯ ನಲವತ್ತು ಉಪಶಾಖೆಗಳು ಇಂದಿಗೂ ಪ್ರಚಲಿತದಲ್ಲಿವೆ. ವಿದೇಶದಲ್ಲಿಯೂ ಕೂಡಾ ದ್ರಾವಿಡ ಭಾಷಿಕರನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ವಿ.ಎಸ್.ಕಾಂತನವರ್ ಮಾತನಾಡಿ, ಎಲ್ಲ ಭಾಷೆಗಳಿಗೂ ಸಂಸ್ಕೃತದ ಕೊಡುಗೆ ಅಪಾರ. ಅದರಂತೆಯೇ ಸಂಸ್ಕೃತಕ್ಕೆ ದ್ರಾವಿಡ ಭಾಷಾ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಮುಜುಂದಾರ್, ಪೋಷಕ ಸದಸ್ಯರಾದ ಆರ್.ಜಿ.ಶಾಸ್ತ್ರೀ, ಮೋಹನ ರಾವ್ ಸೇರಿ ಅನೇಕರಿದ್ದರು.