ನಿರ್ಮಿತಿ ಕೇಂದ್ರದಲ್ಲಿ ಅಕ್ರಮ; ತನಿಖೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 15
ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಇದುವರೆಗೆ ವಹಿಸಿದ ಎಲ್ಲ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಧರಣಿ ನಡೆಸಿದರು.
ನಗರದ ಜಿಪಂ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲು ನಿರ್ಮಿತಿ ಕೇಂದ್ರ ಹಾಗೂ ಭೂಸೇನಾ ನಿಗಮಗಳನ್ನು ಸ್ಥಾಪಿಸಿ ಕಾಮಗಾರಿಗಳನ್ನು ವಹಿಸಿದೆ. ಆದರೆ ಈ ಸಂಸ್ಥೆಗಳು ಕಾಮಗಾರಿಗಳ ಹೆಸರಿನಲ್ಲಿ ಅಕ್ರಮಗಳ ತಾಣಗಳಾಗಿವೆ ಎಂದು ಆರೋಪಿಸಿದರು.
ಅನುದಾನ ದುರ್ಬಳಕೆ: ಅದರಲ್ಲೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ಪ್ರಯೋಜನವಾಗದ ರೀತಿಯಲ್ಲಿ ಕಾಮಗಾರಿಗಳ ಅಂದಾಜು ವೆಚ್ಚ ಸಿದ್ಧಪಡಿಸಿ ಕಾಮಗಾರಿ ನಿರ್ವಹಿಸುವ ಮೂಲಕ ನಿರುಪಯುಕ್ತಗೊಳಿಸಲಾಗುತ್ತಿದೆ ಎಂದು ದೂರಿದರು.
ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಮ್ಮ ಹಿಂಬಾಲಕರಿಗೆ ಕಾಮಗಾರಿಯ ಗುತ್ತಿಗೆ ನೀಡುವ ಮೂಲಕ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಿನ್ನಿ ಗ್ರಾಮದಲ್ಲಿ ದೊಡ್ಡ ಕೆರೆಯಿದ್ದು, ಜನರಿಗೆ ನೀರಿನ ಮೇಲ್ತೊಟ್ಟಿ ಅವಶ್ಯಕತೆಯಿದೆ. ಆದರೆ ಅಧಿಕಾರಿಗಳು ಸಣ್ಣ ಕೆರೆ ದುರಸ್ತಿ ಹೆಸರಿನಲ್ಲಿ ಗ್ರಾಮಕ್ಕೆ 20 ಲಕ್ಷ ಮಂಜೂರಾಗಿತ್ತು.
ಹೆಸರು ಒಂದು, ಕಾಮಗಾರಿ ಮತ್ತೊಂದು: ಆದರೆ ಆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಆ ಕಾಮಗಾರಿಯ ಬದಲಿಗೆ ನೀರಿನ ಮೇಲ್ತೊಟ್ಟಿ ನಿರ್ಮಿಸಲು ಆದೇಶಿಸಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನಿರ್ಮಿತಿ ಕೇಂದ್ರದ ಅಧಿಕಾರಿ ಗುರುರಾಜ್ ಅವರು ಸಣ್ಣ ಕೆರೆಯ ದುರಸ್ತಿ ಹೆಸರಿನಲ್ಲಿಯೇ ಕಾಮಗಾರಿ ನಡೆಸಿದ್ದಾರೆಂದು ಆರೋಪಿಸಿದರು. ಮೇಲಧಿಕಾರಿಗಳ ಆದೇಶ ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿರುವ ನಿರ್ಮಿತಿ ಕೇಂದ್ರದ ಅಧಿಕಾರಿ ಗುರುರಾಜ್ ಅವರು ಕಳಪೆ ಮಟ್ಟದಲ್ಲಿ ಕಾಮಗಾರಿ ಕೈಗೊಂಡು ಅಕ್ರಮ ನಡೆಸಿದ ಬಗ್ಗೆ ಸಮಗ್ರ ತನಿಖೆ ನಡೆಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಶರಣಪ್ಪ ದಿನ್ನಿ, ಲಕ್ಷ್ಮಣ್ ಕುರುಡಿ, ತಾಲೂಕು ಸಂಘಟನಾ ಸಂಚಾಲಕರಾದ ಹನುಮಂತ ಅರೋಲಿ, ಚನ್ನಬಸವ ಯಕ್ಲಾಸಪುರ ಸೇರಿದಂತೆ ಅನೇಕ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.