ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾರಕಕ್ಕೇರಿದ ಕುಡಿವ ನೀರಿನ ಸಮಸ್ಯೆ

Mainashree
Updated On : 17 May 2013, 11:47 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಮೇ 16
ತಾಲೂಕಿನ ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ನದಿಯಲ್ಲಿ ನೀರಿದೆ, ಆದರೆ ಅದು ಹಸಿರುಗಟ್ಟಿ ಮತ್ತುಷ್ಟು ಕಲುಷಿತಗೊಂಡಿದೆ. ಈ ನೀರನ್ನು ಕುಡಿದು ವಾತಿ- ಭೇದಿಯಿಂದ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಕ್ರಮ ಕೈಗೊಂಡಿದ್ದರೂ ಫಲಾನುಭವಿಗಳಿಗೆ ಇನ್ನೂ ಅದರ ಲಾಭ ಸಿಗದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನದಿದಂಡೆಯ ಗ್ರಾಮಗಳಾದ ಕೆಂಗಲ್, ದಢೇಸ್ಗೂರು, ಮುಕ್ಕುಂದಾ, ಉಪ್ಪಳ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಖಾಸಗಿ ಕೆರೆಗಳಿಂದ ಬೈಕ್ ಮತ್ತಿತರ ವಾಹನಗಳಲ್ಲಿ ಕೊಡ ತುಂಬಿಕೊಂಡು ಬರುವುದು ಈಗ ಸರ್ವಸಾಮಾನ್ಯವಾಗಿದೆ.
ತೀವ್ರ ಸಮಸ್ಯೆ: ಬಡ ಕೂಲಿಕಾರರಿಗಂತೂ ಕಿ.ಮೀ.ಗಟ್ಟಲೇ ತಲೆಯ ಮೇಲೆ ಹೊತ್ತು ತರುವು ಸ್ಥಿತಿ ಎದುರಾಗಿದೆ. ಖಾಸಗಿ ಕೆರೆಗಳ ಮಾಲೀಕರು ಕೆರೆಗಳಿಗೆ ಬಾರದಂತೆ ಸುತ್ತ ಬೇಲಿ ಹಾಕಿ ಕಾಯುತ್ತಿದ್ದು, ನೀರು ತುಂಬಿಕೊಳ್ಳಲು ಹೋದರೆ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಕೆಂಗಲ್ ಗ್ರಾಮದ ಶಂಕರಮ್ಮ ಎನ್ನುವ ಮಹಿಳೆ ನೋವಿನಿಂದ ಹೇಳುತ್ತಾರೆ.
ಬರೀ ಆಶ್ವಾಸನೆ..: ನದಿಪಾತ್ರದ ಹತ್ತಾರು ಗ್ರಾಮಗಳ ಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ನದಿಯ ನೀರನ್ನು ಕುಡಿದು ಅಸ್ವಸ್ಥಗೊಂಡ ಕಾರಣ ಇತ್ತೀಚೆಗೆ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಂಗಲ್, ದಢೇಸ್ಗೂರು, ಗ್ರಾಮಸ್ಥರು ಚಿಕಿತ್ಸೆ ಪಡೆದಿರುವುದಾಗಿ ಹೇಳುತ್ತಾರೆ. ಈ ಹಿಂದಿನ ಶಾಸಕ ವೆಂಕಟರಾವ ನಾಡಗೌಡ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಲ್ಲಿ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತೇನೆಂದು ಹೇಳುತ್ತಾ ಬಂದಿದ್ದಾರೆಯೇ ಹೊರತು ಇಲ್ಲಿಯವರೆಗೆ ಶುದ್ಧ ನೀರಿನ ಪೂರೈಕೆ ಕನಸು ನನಸಾಗಿಲ್ಲ.
ಇತ್ತೀಚೆಗೆ ವಿಧಾನಸಭೆಗೆ ಆಯ್ಕೆಯಾಗಿರುವ ಬಾದರ್ಲಿ ಹಂಪನಗೌಡ ಅವರಾದರೂ ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆಯಲ್ಲಿ ಮಂಜೂರಾದ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement