ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಸ್ಪತ್ರೆಲಿ ನೀರಿಲ್ಲ... ರೋಗಿಗಳ ಪರದಾಟ ಕೇಳೋರಿಲ್ಲ

Lingaraj Badiger
Updated On : 18 May 2013, 11:53 am

ಕನ್ನಡಪ್ರಭ ವಾರ್ತೆ, ಕಮಲನಗರ, ಮೇ 17
ಔರಾದ್ ತಾಲೂಕಿನ ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದೊಂದು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ.
 ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಸಮಸ್ಯೆ ಎದುರಿಸುತ್ತಿದ್ದು ಆಸ್ಪತ್ರೆಯಲ್ಲಿ ನೀರಿಗೆ ಬರ ಬಂದಂತಾಗಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು ಪ್ರತಿದಿನ 400 ರಿಂದ 450 ಹೊರ ರೋಗಿಗಳು ಆಗಮಿಸುತ್ತಾರೆ. ಅಲ್ಲದೇ ತಿಂಗಳಿಗೆ ಸುಮಾರು 30 ರಿಂದ 40 ಹೆರಿಗೆಗಳಾಗುತ್ತವೆ. 15 ದಿವಸಕ್ಕೊಮ್ಮೆ ಶಸ್ತ್ರಚಿಕಿತ್ಸೆ ಆಗುತ್ತಿತ್ತು. ಆದರೆ ನೀರಿನ ಸಮಸ್ಯೆ ಕಾಡುತ್ತಿರುವುದರಿಂದ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಶಸ್ತ್ರಚಿಕಿತ್ಸೆಯೇ ಮಾಡಿಲ್ಲ ಎನ್ನಲಾಗುತ್ತಿದೆ.
ಕೊಡ ಹಿಡಿದು ಅಲೆದಾಟ: ಆಸ್ಪತ್ರೆಯಲ್ಲಿ ಒಳರೋಗಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ಸಂಬಂಧಪಟ್ಟವರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಆಸ್ಪತ್ರೆ  ಆವರಣದಲ್ಲೇ ಆಸ್ಪತ್ರೆ ಸಿಬ್ಬಂದಿ ವಸತಿಗೃಹಗಳಿದ್ದು, ದಿನ ಬೆಳಗಾದರೆ ನೀರಿಗಾಗಿ ಕೊಡಗಳನ್ನು ಹಿಡಿದು ಅಲೆದಾಡುವ ಸ್ಥಿತಿ ಉಂಟಾಗಿದೆ. ಆಸ್ಪತ್ರೆ ಆವರಣದಲ್ಲಿ ಜಿಪಂ ಸದಸ್ಯರ ಅನುದಾನದಡಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ ಅದು ಕೂಡ ಕೆಲ ದಿನಗಳ ಹಿಂದೆ ಬತ್ತಿ ಹೋಗಿದೆ. ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಕೊಳವೆ ಬಾವಿ ಕೊರೆದಿದ್ದರು. ಆದರೆ ಅಲ್ಲಿ ನೀರೇ ಇದ್ದಿಲ್ಲ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಂದು ಹನಿ ನೀರು ಸಿಗದಂತಾಗಿದೆ.
ಅರ್ಜಿ ಫಲ ನೀಡಿಲ್ಲ: ಆಸ್ಪತ್ರೆ ಒಳಗಡೆ ಒಂದು ನೀರಿನ ಫಿಲ್ಟರ್ ಇದ್ದರೂ ಕೂಡ, ಅದರಲ್ಲಿ ನೀರಿಲ್ಲದೇ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದೆ. ಆಸ್ಪತ್ರೆಯಲ್ಲಿ ನೀರಿಲ್ಲ ಎಂದು ರೋಗಿಗಳು ವೈದ್ಯಾಧಿಕಾರಿಗಳನ್ನು ಕೇಳಿದರೆ, ಈ ಕುರಿತು ಪಿಡಿಒ ಹಾಗೂ ಪಂಚಾಯತ್ ಅಧ್ಯಕ್ಷರಿಗೆ ಒಂದು ತಿಂಗಳ ಹಿಂದೆಯೇ ನೀರಿನ ಸಮಸ್ಯೆ ಕುರಿತು ಅರ್ಜಿ ನೀಡಿದ್ದೇನೆ ಎನ್ನುತ್ತಾರೆ. ಆಸ್ಪತ್ರೆಗಾಗಿ ಸ್ಥಳೀಯ ಸಮಿತಿ ಇದ್ದರೂ, ಅದು ಯಾವುದೇ ಕೆಲಸಕ್ಕೆ ಬಾರದಂತಾಗಿದೆ ಎಂದು ಆಸ್ಪತ್ರೆಗೆ ಬರುವ ರೋಗಿಗಳ ಅನಿಸಿಕೆಯಾಗಿದೆ.
ಕಮಲನಗರ ಆಸ್ಪತ್ರೆಗೆ ಸುತ್ತಲಿನ ಹೋಬಳಿಯ ಜನ ಬರುತ್ತಿರುವುದರಿಂದ ನೀರಿನ ಅತಿ ಅವಶ್ಯಕತೆ ಇದೆ. ಅಲ್ಲದೇ ಹೆರಿಗೆ ಆದ ನಂತರ 4-5 ದಿನಗಳವರೆಗೆ ರೋಗಿಗಳು ಆಸ್ಪತ್ರೆಯಲ್ಲಿರುವುದರಿಂದ ಅವರಿಗೆ ಸ್ನಾನ ಮಾಡಿಸಲು, ಬಟ್ಟೆ ಒಗೆಯಲು ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಸ್ಥಿತಿ ಬಂದೊದಗಿದೆ ಎನ್ನುವುದು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಂಜನಾಬಾಯಿ ಎಂಬ ಮಹಿಳೆಯ ಅನಿಸಿಕೆಯಾಗಿದೆ.
ಸಮಸ್ಯೆ ಕೇಳೋರಿಲ್ಲ: ಆಸ್ಪತ್ರೆಯಲ್ಲಿ ಕಳೆದ 1 ತಿಂಗಳಿನಿಂದ ನೀರಿಗೆ ಕೊರತೆ ಕಂಡು ಬಂದಿದ್ದರೂ, ಯಾರೂ ಈ ಕಡೆ ಗಮನ ಹರಿಸಿಲ್ಲ. ಒಳರೋಗಿಗಳು ಸ್ಥಳೀಯರಾಗಿದ್ದರೆ, ತಮ್ಮ ಮನೆಯಿಂದ ನೀರು ತರಬಹುದು. ಆದರೆ ಹೊರ ಗ್ರಾಮಗಳಿಂದ ಬಂದ ರೋಗಿಯ ಸಮಸ್ಯೆ ಕೇಳಲು ಯಾರು ಬರುತ್ತಿಲ್ಲ ಎಂದು ಕಮಲನಗರ ಮಂಜುನಾಥ ಸ್ವಾಮಿ ಎನ್ನುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಹಣ ನೀಡಿದರೂ ನೀರು ಸಿಗುತ್ತಿಲ್ಲ. ಸರ್ಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಹಣದ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಈ ದುಸ್ಥಿತಿಗೆ ಬರಲು ಇಲ್ಲಿನ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಕಾರಣರಾಗಿದ್ದಾರೆ. ಏನೇ ಇರಲಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೆ ಸಾಕು, ಮತ್ತೇನು ಬೇಕಾಗಿಲ್ಲ ಎಂಬುದೇ ಗ್ರಾಮಸ್ಥರ ಅನಿಸಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement